ಬೆಂಗಳೂರು: ರಾಜ್ಯದಲ್ಲಿ ಜನರ ಗೋಗರೆದು ಅಂಗಲಾಚಿ, ಭಿಕ್ಷೆ ಬೇಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ನವರು, ಆಡಳಿತ ಚುಕ್ಕಾಣಿ ಹಿಡಿದ ತಕ್ಷಣ ಬದಲಾಗಿದೆ. ಎಲ್ಲರಿಗೂ ಕಿರುಕುಳ ಕೊಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಾವಾ? ಇವ್ರಾ ನವರಂಗಿಗಳು? ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಆರೋಪಕ್ಕೆ ಮಾಜಿ ಸಚಿವ ಅಶ್ವತ್ಥನಾರಾಯಣ್ ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಕೂಡಲೇ ಡಿ ಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರವನ್ನು ಹುಟ್ಟು ಹಾಕಿ ಅದನ್ನು ಪಾಲನೆ ಮಾಡಿ ಪೋಷಿಸಿ ಬೆಳೆಸಿ ಹೆಮ್ಮರವನ್ನಾಗಿ ಮಾಡಿದೆ. ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಅವರ ಪಕ್ಷದ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ, ರಾಜೀವ್ ಗಾಂಧಿ ಭ್ರಷ್ಟಾಚಾರವನ್ನು ಒಪ್ಪಿಕೊಂಡಿದ್ದರು. ಭ್ರಷ್ಟಾಚಾರವನ್ನು ಏನು ಮಾಡಲು ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಭ್ರಷ್ಟಾಚಾರದೊಂದಿಗೆ ಬದುಕುವುದನ್ನು ಕಲಿಯಿರಿ ಎಂದಿದ್ದರು. ಅಂತಹ ಪಕ್ಷದವರು ಕರ್ನಾಟಕದಲ್ಲಿ ಗೋಗರೆದು ಅಧಿಕಾರ ಕೊಡಿ ಎಂದು ಅಂಗಲಾಚಿ ಅಧಿಕಾರಕ್ಕೆ ಬಂದ ತಕ್ಷಣ ಈಗ ಬದಲಾಗಿದ್ದಾರೆ. ನನ್ನನ್ನು ನವರಂಗಿ ನಾರಾಯಣಾ ಅಂದಿದ್ದಾರೆ. ಇವರಾ ನವರಂಗಿಗಳು ನಾವಾ? ಇವ್ರಾ? ಎಂಬ ಮಾತು ಬರುತ್ತೆ ಎಂದು ಶಿವಕುಮಾರ್ ಭಂಡತನದಿಂದ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಅಧಿಕಾರಕ್ಕೆ ಬಂದ ತಕ್ಷಣ ಭಂಡತನವನ್ನು ತೋರುತ್ತಿದ್ದಾರೆ. ನೀವು ಬೇಕಾದ್ದು ಹೇಳಿ, ನಾವು ಮಾಡುವುದನ್ನೇ ಮಾಡುತ್ತೇವೆ ಎನ್ನುವ ನಿಲುವಿಗೆ ಬಂದಿದ್ದಾರೆ. ಇವರು ಅಂಗಲಾಚಿದ್ದಕ್ಕೆ ಜನ ಪಾಪ ಎಂದು ಅಧಿಕಾರ ಕೊಟ್ಟಿದ್ದಾರೆ. ನಮಗೆ ಭಿಕ್ಷೆ ಕೊಡಿ, ಇದೊಂದು ಬಾರಿ ಅವಕಾಶ ಕೊಡಿ ಎಂದು ಜನರನ್ನು ಕೇಳಿದರು. ಜನ ಅವಕಾಶ ನೀಡಿದ್ದಾರೆ. ಆದರೆ ಅಧಿಕಾರಕ್ಕೆ ಬಂದ ದಿನದಿಂದಲೂ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಡಿ ಕೆ ಶಿವಕುಮಾರ್ ಅವರು ಏಳು ಬಾರಿ ಶಾಸಕನಾಗಿ ಗೆದ್ದರೂ, ಕನಕಪುರ ಕ್ಷೇತ್ರ ಇನ್ನೂ ಹಿಂದುಳಿದಿದೆ. ರಾಮನಗರ ಜಿಲ್ಲೆಯೂ ಹಿಂದುಳಿದಿದ್ದು, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೌಲಭ್ಯವನ್ನೂ ಕೊಟ್ಟಿಲ್ಲ. ಡಿಕೆಶಿ ರಾಮನಗರಕ್ಕೆ ದ್ರೋಹ ಬಗೆಯುವ ವ್ಯಕ್ತಿ. ರಾಮಮಂದಿರ ಕಟ್ಟಲು ನಾವು ಮುಂದಾಗಿದ್ದರೆ, ತಡೆದವರು ಅವರು. ಲೋಕಸಭೆ ಚುನಾವಣೆಯಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಮನಗರದ ಜನಕ್ಕೆ ದ್ರೋಹ ಬಗೆದಿದ್ದಾರೆ. ನೆಟ್ಟಗೆ ಒಂದು ಕೆಲಸ ಮಾಡಿಲ್ಲ. ಇವತ್ತು ರಾಮನಗರ ಜಿಲ್ಲೆಯಲ್ಲಿ ಅವರ ಪಕ್ಷದವರೇ ಮೋರಿ ನೀರನ್ನು ನಮಗೆ ಕುಡಿಸುತ್ತಿದ್ದಾರೆ ಎಂದಿದ್ದರು. ಆದರೆ ರಾಮನಗರಕ್ಕೆ 450 ಕೋಟಿ ಯೋಜನೆ ಮೂಲಕ ಕಾವೇರಿ ನೀರು ಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದರು.