ಬೆಂಗಳೂರು:ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರು ಮತ್ತು ಸಫಾಯಿ ಕರ್ಮಚಾರಿಗಳಿಗೆ ನಾಳೆ ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಾಳೆಯಿಂದ ಕೊರೊನಾ ಲಸಿಕೆ ನೀಡಿಕೆ ಪ್ರಾರಂಭವಾಗುತ್ತಿದ್ದು, ಪೂರ್ವತಯಾರಿ ಬಗ್ಗೆ ಡಿಸಿಗಳ ಜೊತೆ ಸಚಿವರು ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ನಾಳೆ ಬೆಳಿಗ್ಗೆ 10.30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ 243 ಹಾಗೂ ಬೆಂಗಳೂರಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದರು.
ಲಸಿಕೆ ನೀಡಿರುವ ಪ್ರತಿ ದಿನದ ಮಾಹಿತಿಯ ಬುಲೆಟಿನ್ ನಿತ್ಯ ಬಿಡುಗಡೆ ಮಾಡುತ್ತೇವೆ. ಲಸಿಕೆ ತೆಗೆದುಕೊಂಡ ನಂತರ ಕೆಲವರಿಗೆ ಸೈಡ್ ಎಫೆಕ್ಟ್ ಆಗಬಹುದು. ಸ್ಪಲ್ಪ ಜ್ವರ ಬರಬಹುದು. ಆಮೇಲೆ ಅದೇ ಸರಿ ಹೋಗುತ್ತದೆ. ಈ ಬಗ್ಗೆ ಆತಂಕಕ್ಕೆ ಒಳಗಾಗಬಾರದು. ಕೊರೊನಾ ಲಸಿಕೆಯಿಂದ ಏನು ಸಮಸ್ಯೆ ಆಗಲ್ಲ. ಸೋಷಿಯಲ್ ಮೀಡಿಯದಲ್ಲಿ ತಪ್ಪು ಮಾಹಿತಿ ಬಂದರೆ ಅದನ್ನು ಯಾರೂ ನಂಬಬಾರದು ಎಂದು ತಿಳಿಸಿದರು.
ಮೊದಲನೇ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡುತ್ತಿದ್ದೇವೆ. ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಮತ್ತು ಪೊಲೀಸರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುವುದು. ರಿಜಿಸ್ಟರ್ ಮಾಡಿಕೊಂಡ ಎಲ್ಲರಿಗೂ ನಾಳೆಯಿಂದ ವ್ಯಾಕ್ಸಿನ್ ನೀಡುತ್ತೇವೆ. ಲಸಿಕೆಯಿಂದ ಯಾರಿಗೂ ಆತಂಕ, ಭಯ ಬೇಡ. ಇದು ಸಂಪೂರ್ಣ ಸುರಕ್ಷಿತವಾಗಿದೆ. ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಎರಡನೇ ಡೋಸ್ ಕೊಡಲಾಗುತ್ತದೆ. ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಕಂಟ್ರೋಲ್ ರೂಂ ಇರುತ್ತದೆ. ಮೊದಲ ಹಂತದಲ್ಲಿ ದೇಶಾದ್ಯಂತ 3 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತದೆ.