ಬೆಂಗಳೂರು: ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ವಿಷ ಗಾಳಿಯ ಎಫೆಕ್ಟ್ ರಾಜಧಾನಿಯಲ್ಲಿ ಕಂಡು ಬಂದಿದೆ. ನಿಷೇಧದ ನಡುವೆಯೂ ಪಟಾಕಿ ಸ್ಪೋಟಕ್ಕೆ ನಗರ ತತ್ತರವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಏರುಪೇರಾಗುವ ಸಂಭವವಿತ್ತು ಎನ್ನುವುದು ಅಂಕಿ-ಅಂಶಗಳಲ್ಲಿ ಕಂಡು ಬಂದಿದೆ.
ದೀಪಾವಳಿ ಹಬ್ಬದ ಮೂರು ದಿನಗಳಲ್ಲಿ ಪಟಾಕಿ ಹಾವಳಿಯಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಳವಾಗಿದೆ. ಎಲ್ಲ ನಿಯಂತ್ರಣ ಕ್ರಮ ಕೈಗೊಂಡಿದ್ದರೂ ಸಿಡಿಸಿದ ಪಟಾಕಿಯಿಂದ ಗಾಳಿಯಲ್ಲಿ ಮಾಲಿನ್ಯಕಾರಕ ಕಣಗಳು ಹೆಚ್ಚಾಗಿ ಕಂಡು ಬಂದಿವೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಿಲ್ಕ್ ಬೋರ್ಡ್, ಸಿಟಿ ರೈಲ್ವೆ ನಿಲ್ದಾಣ, ಜಯನಗರದ ಸುತ್ತ ಮುತ್ತ ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಏರುಪೇರಾಗಿರುವುದು ದಾಖಲಾಗಿದೆ. ಪಟಾಕಿ ನಿಷೇಧ ಹೇರಿದ್ದರೂ ಅನೇಕ ಕಡೆಗಳಲ್ಲಿ ಹಸಿರು ಪಟಾಕಿ ಜೊತೆ ಎಲ್ಲಾ ಪಟಾಕಿ ಸ್ಫೋಟವಾಗಿದೆ. ಮೂರು ದಿನಗಳ ಕಾಲ ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಪಟಾಕಿ ಹೊಡೆಯಲು ಅವಕಾಶ ನೀಡಿದರೂ ಕೆಲವೆಡೆ ಅವಧಿ ಮೀರಿ ಪಟಾಕಿ ಸಿಡಿಸಿದ್ದಾರೆ. ಹೀಗಾಗಿ ಈ ದಿನಗಳಲ್ಲಿ ನಗರದಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ. ಹೀಗಾಗಿ ಪಟಾಕಿ ಸಿಡಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.