ಬೆಂಗಳೂರು :ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟಿದ್ದ ಪ್ರಕರಣದ ಸಂಬಂಧ ಬಂಧಿತರಾಗಿದ್ದ ಆರೋಪಿಗಳು ಮೂರು ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮೂರೂ ಹೇಳಿಕೆಗಳನ್ನು ಮರು ಪರಿಶೀಲನೆ ಮಾಡಲು ತನಿಖಾ ತಂಡ ನಿರ್ಧಾರಿಸಿದ್ದು, ಆರೋಪಿಗಳ ಮಾಹಿತಿಗೆ ಪೂರಕ ಸಾಕ್ಷಿಗಳನ್ನು ಹುಡುಕುತ್ತಿದೆ ಎನ್ನಲಾಗಿದೆ.
ಆರೋಪಿಗಳ ಹೇಳಿಕೆ1: ಬಡವರು ಬಡವರಾಗೇ ಇರುತ್ತಾರೆ. ಶ್ರೀಮಂತರು ಶ್ರೀಮಂತರಾಗಿಯೇ ಇರುತ್ತಾರೆ ಎಂದು ಆಕ್ರೋಶಗೊಂಡಿದ್ದೆವು ಎಂದು ಆರೋಪಿಗಳು ತಿಳಿಸಿದ್ದಾರೆ. ಒಂದಲ್ಲ ಮೂರು ಸಲ ಕೆಲಸ ಕೇಳ್ಕೊಂಡು ಬಂದಿದ್ದೆವು. ಆದರೆ, ಅವರ ಮನೆ ಹತ್ತಿರ ಒಂದು ಸಾರಿ ಕೂಡ ಶಾಸಕ ಸತೀಶ್ ರೆಡ್ಡಿ ಭೇಟಿ ಆಗಲಿಲ್ಲ. ಗೇಟ್ ಬಳಿಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಕಾದು ವಾಪಸ್ ಹೋಗಿದ್ದೆವು. ಹಣವಿದ್ದವರು ಹಣ ಮಾಡುತ್ತಾ ದೊಡ್ಡ ಕಾರಿನಲ್ಲಿ ತಿರುಗುತ್ತಾರೆ. ನಾವು ಬಡವರು ಬಡವರಾಗಿಯೇ ಇರಬೇಕಾ? ಇವರೆಲ್ಲರಿಗೆ ಬುದ್ಧಿ ಕಲಿಸಬೇಕು ಎಂದು ತೀರ್ಮಾನ ಮಾಡಿ ಈ ಕೆಲಸ ಮಾಡಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಹೇಳಿಕೆ 2 :ದೊಡ್ಡವರಿಗೆ ಹೊಡೆದರೆ ದೊಡ್ಡ ಹೆಸರು ಮಾಡಬಹುದು. ಹೀಗೆ ಎಷ್ಟು ದಿನ ಬದುಕೋದು ಏನೂ ಇಲ್ಲದವರಂತೆ. ನಾವು ದೊಡ್ಡವರಂತೆ ಆಗಬೇಕು, ಅದಕ್ಕೆ ದೊಡ್ಡವರಿಗೇ ಹೊಡೆಯಬೇಕು, ದೊಡ್ಡವರು ನಮ್ಮನ್ನು ಕಂಡರೆ ಭಯ ಪಡಬೇಕು ಎಂದು ಮಾತನಾಡಿಕೊಂಡಿದ್ದೆವು. ಇದಕ್ಕೆ ಬೆಂಗಳೂರಿನಲ್ಲಿ ದೊಡ್ಡ ರೌಡಿಯಾಗಿ ರಾಜಕೀಯದಲ್ಲಿ ಇರುವ ಓರ್ವನ ಹೆಸರು ಪ್ರಸ್ತಾಪಿಸಿ ನಾವು ಅವರಂತೆ ಆಗಬೇಕು. ಅದಕ್ಕೆ ದೊಡ್ಡವರಿಗೆ ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದಾಗಿ ಮತ್ತೊಂದು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಹೇಳಿಕೆ 3 :ಜೈಲಿಗೆ ಹೋದವರಿಗೆ ಸಹಾಯ ಮಾಡಲಿಲ್ಲ. ಯಾರಿಗೂ ಸಹಾಯ ಮಾಡದೇ ಇವರು ದೊಡ್ಡವರಾ? ಎಂದು ಪೊಲೀಸರಿಗೇ ಮರು ಪ್ರಶ್ನಿಸಿದ್ದಾರಂತೆ. ಆದರೆ, ಯಾರು ಜೈಲಿಗೆ ಹೋಗಿದ್ದರು? ಯಾರಿಗೆ ರೆಡ್ಡಿ ಸಹಾಯ ಮಾಡಬೇಕಿತ್ತು ಎನ್ನುವುದು ತನಿಖೆ ವೇಳೆ ಗೊತ್ತಾಗಿಲ್ಲ. ಮೂರು ಹೇಳಿಕೆಗಳನ್ನು ದಾಖಲಿಸಿರುವ ಪೊಲೀಸರಿಗೆ ಕೇಸ್ ತಲೆ ನೋವಾಗಿ ಪರಿಣಮಿಸಿದೆ. ಸದ್ಯ ಹೆಚ್ಚಿನ ತನಿಖೆಯನ್ನು ನಗರದ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ನೇತ್ರತ್ವದಲ್ಲಿ ನಡೆಯುತ್ತಿದೆ.