ಬೆಂಗಳೂರು /ಹೊಸಕೋಟೆ: ಚಿನ್ನಾಭರಣ ಗಿರವಿ ಇರಿಸಲು ಬಂದು ಅಂಗಡಿಗೆ ಬೆಂಕಿಯಿಟ್ಟಿದ್ದ ಆರೋಪಿಯನ್ನು ಗಿರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಸವರಾಜ್ ಬಂಧಿತ ಆರೋಪಿಯಾಗಿದ್ದು, ಈತ ಫೆಬ್ರುವರಿ 12ರಂದು ಗಿರಿನಗರದ ಮುನೇಶ್ವರ ಬ್ಲಾಕ್ ಸಂತೋಷ್ ಬ್ಯಾಂಕರ್ಸ್ ಮತ್ತು ತುಳಸಿ ಜ್ಯುವೆಲ್ಲರ್ಸ್ ಅಂಗಡಿಯಲ್ಲಿ ಈ ಕೃತ್ಯ ಎಸಗಿದ್ದ. ಆರೋಪಿಯ ಕೃತ್ಯದಿಂದ ಅಂಗಡಿ ಮಾಲೀಕ ಭವರ್ ಲಾಲ್ (54) ಬೆನ್ನಿಗೆ ಗಾಯಗಳಾಗಿದ್ದವು.
ಘಟನೆ ಹಿನ್ನೆಲೆ: ಬೆಳಗ್ಗೆ ಅಂಗಡಿಗೆ ಬಂದಿದ್ದ ಆರೋಪಿ ಬಸವರಾಜ್ ತನ್ನ ಬಳಿಯಿದ್ದ ಚಿನ್ನಾಭರಣ ಅಡವಿಟ್ಟುಕೊಂಡು ಹಣ ನೀಡುವಂತೆ ಕೇಳಿದ್ದ. ಆರೋಪಿಯ ಬಳಿಯಿದ್ದ ಚಿನ್ನಾಭರಣ ಪರಿಶೀಲಿಸಿದ್ದ ಅಂಗಡಿ ಮಾಲೀಕ ಭವರ್ ಲಾಲ್, ಪ್ರತಿಯಾಗಿ ಐವತ್ತು ಸಾವಿರ ರೂ ನೀಡುವುದಾಗಿ ತಿಳಿಸಿದ್ದರು. ಅಷ್ಟಕ್ಕೇ ಸಿಟ್ಟಿಗೆದ್ದ ಆರೋಪಿ ಅಂಗಡಿ ಮಾಲೀಕನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಘಟನೆಯಲ್ಲಿ ಅಂಗಡಿಗೆ ಹಾನಿಯಾಗಿದ್ದು ಮಾಲೀಕ ಭವರ್ ಲಾಲ್ ಬೆನ್ನಿಗೆ ಗಾಯಗಳಾಗಿದ್ದವು. ಸದ್ಯ ಪ್ರಕರಣ ದಾಖಲಿಸಿಕೊಂಡ ಗಿರಿನಗರ ಠಾಣಾ ಪೊಲೀಸರು ನೆಲಮಂಗಲ ಬಳಿ ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ:ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ
ನಿಂತಿದ್ದ ಕಾರಿಗೆ ಕಸದಿಂದ ತಗುಲಿದ ಬೆಂಕಿ:ನಿಂತಿದ್ದ ಕಾರಿಗೆ ಕಸದಿಂದ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಕಾರು ಸುಟ್ಟು ಭಸ್ಮವಾಗಿರುವ ಘಟನೆ ಹೊಸಕೋಟೆ ನಗರದ ಸಾಧನಾ ಚಿತ್ರಮಂದಿರ ಬಳಿ ನಡೆದಿದೆ. ಟಾಟಾ ಇಂಡಿಕಾ ಕಾರಿಗೆ ಬೆಂಕಿ ತಗುಲಿದ್ದು, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.