ಬೆಂಗಳೂರು: ನಗರದ ಕಾಚರಕನಹಳ್ಳಿ ಕೊಳಗೇರಿ ಪ್ರದೇಶದಲ್ಲಿ ಗುಡಿಸಲುಗಳು ಬೆಂಕಿಗೆ ಆಹುತಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕಲಬುರಗಿ ಮೂಲದ ಕಾರ್ಮಿಕರ ಗುಡಿಸಲುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಕುರಿತು ವಕೀಲರಾದ ವೈಶಾಲಿ ಹೆಗಡೆ ಬರೆದ ಪತ್ರವನ್ನು ಆಧರಿಸಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲ ವಿಕ್ರಮ್ ಹುಯಿಲಗೋಳ ಪೀಠಕ್ಕೆ ಮಾಹಿತಿ ನೀಡಿ, ಗುಡಿಸಲುಗಳನ್ನು ಕಳೆದುಕೊಂಡಿರುವ ಕಾರ್ಮಿಕರಿಗೆ ನೆರವು ನೀಡಲು ಸರ್ಕಾರ ಕ್ರಮ ಕೈಗೊಂಡಿದೆ. ವಲಸೆ ಹೋಗಿದ್ದ 170 ಕಾರ್ಮಿಕ ಕುಟುಂಬಗಳು ಮತ್ತೆ ವಾಪಸ್ ಬಂದಿದ್ದು, ಅಲ್ಲಿಯೇ ದುರಸ್ತಿ ಮಾಡಿಕೊಂಡು ನೆಲೆಸಲು ಆರಂಭಿಸಿವೆ ಎಂದು ಮಾಹಿತಿ ನೀಡಿದರು.
ಅಲ್ಲದೆ ಸುಟ್ಟು ಹೋಗಿರುವ ಗುಡಿಸಲುಗಳಿದ್ದ ಜಾಗ ಕಂದಾಯ ಇಲಾಖೆ ಅಧೀನದಲ್ಲಿದೆ. ಈ ಜಾಗವನ್ನು ಬಿಡಿಎ ತನಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದು, ಇನ್ನೂ ಪರಿಶೀಲನೆಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾರ್ಮಿಕರು ಸರ್ಕಾರದ ಜಾಗದಲ್ಲಿ ನೆಲೆಸಿದ್ದರೆ ಅವರನ್ನು ಸ್ಥಳಾಂತರಿಸುವ ಕುರಿತು ಕಾನೂನು ರೀತಿ ಕ್ರಮ ಜರುಗಿಸಬಹುದು. ಇದಕ್ಕೆ ನ್ಯಾಯಾಲಯದ ಅಭ್ಯಂತರವಿಲ್ಲ. ಆದರೆ ಅಗ್ನಿ ಅವಘಡದಲ್ಲಿ ನಷ್ಟ ಅನುಭವಿಸಿರುವ ಕಾರ್ಮಿಕರಿಗೆ ಪರಿಹಾರ ನೀಡಬೇಕು ಎಂದು ಸ್ಪಷ್ಟಪಡಿಸಿತು.