ಬೆಂಗಳೂರು:''ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ತಗುಲಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಇಲಾಖೆಗಳಿಂದ ಸಮಗ್ರ ತನಿಖೆ ಮಾಡಲು ಸೂಚನೆ ನೀಡಿದ್ದೇನೆ'' ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಸದಾಶಿವ ನಗರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ''ನಾನು ತನಿಖೆಗೆ ಆದೇಶ ನೀಡಿದ್ದೇನೆ. ಒಂದು ಬಿಬಿಎಂಪಿ ವತಿಯಿಂದ ತನಿಖೆ ನಡೆಯಲಿದೆ. ಎರಡನೇಯದ್ದು ಪೊಲೀಸರಿಂದ, ಮೂರನೇಯದ್ದು, ವಿದ್ಯುತ್ ಪರಿವೀಕ್ಷಣಾ ಇಲಾಖೆಯಿಂದ ತನಿಖೆಗೆ ನಡೆಸಲು ಸೂಚನೆ ನೀಡಿದ್ದೇನೆ. ಮೂರು ಇಲಾಖೆಗಳಿಂದಲೂ ತನಿಖೆ ನಡೆಯಲಿದೆ'' ಎಂದು ಸ್ಪಷ್ಟಪಡಿಸಿದರು.
''ಪ್ರಯೋಗಾಲಯ ಇರುವ ಸ್ಥಳ ಸರಿ ಇಲ್ಲ. ಅದು ಅಲ್ಲಿ ಇರಕೂಡದಿತ್ತು. ಯಾರೇ ಒತ್ತಡ ತಂದಿದ್ದರೂ ಆಡಳಿತ ವರ್ಗದ ತಪ್ಪಿದೆ. ಅಂತ ಜಾಗದಲ್ಲಿ ಅದನ್ನು ಇಡಬಾರದಿತ್ತು. ದೂರದಲ್ಲಿ ಓಪನ್ ಸ್ಥಳದಲ್ಲಿ ಆ ಕಚೇರಿ ಇರಬೇಕು. ಅದನ್ನೆಲ್ಲಾ ತನಿಖೆ ಮಾಡುತ್ತೇವೆ. ವರದಿ ಬಂದ ಮೇಲೆ ಕ್ರಮ ತೆಗದುಕೊಳ್ಳಲಾಗುತ್ತದೆ'' ಎಂದು ತಿಳಿಸಿದರು.
''ಈ ಹಿಂದೆಯೂ ಬೆಂಕಿ ಬಿದ್ದಿತ್ತು. ಕಡತಗಳನ್ನು ಮುಚ್ಚಿ ಹಾಕುವ ಯತ್ನ ನಡೆದಿತ್ತು. ಈ ಘಟನೆ ನಡೆದಾಗ ಪಕ್ಕದಲ್ಲೇ ಕಡತಗಳು ಇತ್ತು. ದುರದೃಷ್ಟವಶಾತ್ ಅಧಿಕಾರಿಗಳಿಗೆ ಗಾಯವಾಗಿದೆ. ಕಡತಕ್ಕೆ ಏನೂ ಹಾನಿಯಾಗಿಲ್ಲ. ಅದನ್ನೆಲ್ಲಾ ಸ್ಥಳಾಂತರ ಮಾಡುತ್ತಿದ್ದೇವೆ. ಬಹಳ ಜಾಗೃತೆಯಿಂದ ಇದ್ದೇವೆ. ಕಡತಗಳನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ನಿನ್ನೆ ಮಧ್ಯರಾತ್ರಿ ತನಕ ನಾನೇ ಬಿಬಿಎಂಪಿಯಲ್ಲಿದ್ದೆ. ಅವರಿಗೆ ಏನೆಲ್ಲಾ ಸೂಚನೆ ಕೊಡಬೇಕು ಕೊಟ್ಟಿದ್ದೇನೆ'' ಎಂದರು.
ಕಾಂಗ್ರೆಸ್ ಟ್ವೀಟ್ ಒಪ್ಪಲು ಸಾಧ್ಯವಿಲ್ಲ:ನಿನ್ನೆ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದ ಘಟನೆಯ ಹಿಂದೆ ಬಿಜೆಪಿ ಇದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ, ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿರಬಹುದು. ಆದರೆ, ಅದನ್ನು ನಾನು ಒಪ್ಪಲು ಸಾಧ್ಯವಿಲ್ಲ. ಆ ಟ್ವೀಟ್ ಅನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.