ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆಜಿಎಫ್ ಬಾಬು ಅವರ ಸಹೋದರಿ ಮನೆಯಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಸಂಪಂಗಿರಾಮನಗರ ಠಾಣಾ ವ್ಯಾಪ್ತಿಯಲ್ಲಿರುವ ಕೆ.ಎಸ್.ಗಾರ್ಡನ್ ನಲ್ಲಿರುವ ಬಾಬು ಸಹೋದರಿ ಶಾಹೀನ್ ತಾಜ್ ವಾಸವಿದ್ದ ಮನೆಯ ಮುಂದೆ ಇದ್ದ ಚಪ್ಪಲಿ ಸ್ಟ್ಯಾಂಡ್ ಬಳಿ ಕಾಣಿಸಿಕೊಂಡ ಬೆಂಕಿ ನಂತರ ಮನೆಯ ಒಳಭಾಗಕ್ಕೂ ಆವರಿಸಿದೆ.
ಕಾಂಗ್ರೆಸ್ ಯುವ ನಾಯಕನ ವಿರುದ್ಧ ಆರೋಪ:ಕಾಂಗ್ರೆಸ್ ಯುವ ನಾಯಕ ಆರ್.ವಿ ಯುವರಾಜ್ ಕಡೆಯವರ ವಿರುದ್ಧ ಆರೋಪ ಕೇಳಿ ಬಂದಿದೆ. ತಡರಾತ್ರಿ ಮಾಜಿ ಶಾಸಕ ಆರ್.ವಿ.ದೇವರಾಜ್ ಪುತ್ರ ಯುವರಾಜ್ ಕಡೆಯ ಎಂಟರಿಂದ ಹತ್ತು ಜನ ಬಂದು ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾರೆ ಎಂದು ಕೆಜಿಎಫ್ ಬಾಬು ಸಹೋದರಿ ಶಾಹೀನ್ ತಾಜ್ ಸಂಪಂಗಿ ರಾಮನಗರ ಠಾಣೆಗೆ ದೂರು ನೀಡಿದ್ದಾರೆ.
ನನಗೆ ನ್ಯಾಯ ಬೇಕು: ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೆಜಿಎಫ್ ಬಾಬು 'ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 500 ಮನೆಗಳನ್ನ ಕಟ್ಟಿಸಲು ಮುಂದಾಗಿದ್ದೆ. ಸಿಂಹದ ಬಾಯಿಗೆ ಬಂದು ನಿಮ್ಮಣ್ಣ ನಿಂತಿದ್ದಾರೆ ಅಂತಾ ಆರ್.ವಿ ಯುವರಾಜ್ ನನ್ನ ತಂಗಿಗೆ ಬಂದು ಧಮ್ಕಿ ಹಾಕಿದ್ರು. ನಿನ್ನೆ ಒಂದಷ್ಟು ಜನ ಬಂದು ಬೆಂಕಿ ಹಾಕಿದ್ದಾರೆ. ನನ್ನ ಕೊಲೆ ಮಾಡುವುದಾಗಿ ಹೇಳಿಕೊಂಡು ತಿರುಗುತ್ತಿದ್ದಾರೆ. ನನಗೆ ನ್ಯಾಯ ಬೇಕಾಗಿದೆ' ಎಂದಿದ್ದಾರೆ.
ಡಿಸಿಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯೆ: 'ಎಸ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯಾರೋ ದುಷ್ಕರ್ಮಿಗಳು ತಡರಾತ್ರಿ 2.30 ರಿಂದ 2.50 ಸುಮಾರಿಗೆ ಬೆಂಕಿ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ. ಎಫ್.ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ಕೆಜಿಎಫ್ ಬಾಬು ಅಮಾನತು:ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನುತುಗೊಳಿಸಿ ಕೆಪಿಸಿಸಿ ಶಿಸ್ತು ಕ್ರಿಯಾ ಸಮಿತಿ ಅಧ್ಯಕ್ಷ ಕೆ.ರಹಮಾನ್ ಖಾನ್ ಕಳೆದ ತಿಂಗಳು(ಜ.6) ಆದೇಶಿಸಿದ್ದರು. ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನಾ ಸಮಿತಿಯಿಂದ ತಮಗೆ ಈಗಾಗಲೇ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಮೂರು ತಿಂಗಳ ಹಿಂದೆಯೇ ತಾವು ಪಕ್ಷದ ನೀತಿಯ ವಿರುದ್ಧವಾಗಿ ಮಾಧ್ಯಮದವರಿಗೆ ವಿವಿಧ ರೀತಿಯ ಹೇಳಿಕೆ ನೀಡುವ ಬಗ್ಗೆ ನೋಟಿಸ್ ನೀಡಲಾಗಿತ್ತು. ನೀವು ಶಿಸ್ತು ಸಮಿತಿಯ ಕಾರಣ ಕೇಳಿ ನೋಟಿಸ್‌ಗೆ ಸಮಂಜಸ ಉತ್ತರ ನೀಡಿರುವುದಿಲ್ಲ. ನಿಮ್ಮ ಈ ನಡೆಯು ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ. ಹಾಗೂ ಹಿನ್ನಡೆಗೂ ಕಾರಣವಾಗುತ್ತಿದೆ ಎಂದು ಗಂಭೀರವಾಗಿ ಪರಿಗಣಿಸಿ, ಈ ಕೂಡಲೇ ನಿಮ್ಮನ್ನು ಪಕ್ಷದಿಂದ ಅಮಾನತು ಗೊಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿತ್ತು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದಿಂದ ಕೆಜಿಎಫ್ ಬಾಬು ಅಮಾನತು: ಕೆಪಿಸಿಸಿ ಆದೇಶ
ಕಾಂಗ್ರೆಸ್ಗೆ ಕೆಜಿಎಫ್ ಬಾಬು ಎಚ್ಚರಿಕೆ: ಇತ್ತೀಚೆಗೆ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ್ದ ಕೆಜಿಎಫ್ ಬಾಬು, 'ನನಗೆ ಕಾಂಗ್ರೆಸ್ ಬ್ಯಾನರ್ನಿಂದ ಗೆದ್ದು ಬರುವ ಅನಿವಾರ್ಯತೆ ಇಲ್ಲ. ಜನ ನನ್ನನ್ನು ಗೆಲ್ಲಿಸುತ್ತಾರೆ. ಪಕ್ಷದಿಂದ ನನ್ನನ್ನು ತೆಗೆದರೆ ಕಾಂಗ್ರೆಸ್ ಗೆ 10ರಿಂದ 15 ಸ್ಥಾನಗಳ ಹಿನ್ನಡೆ ಆಗುತ್ತದೆ. ಕಾಂಗ್ರೆಸ್ನಿಂದ ತೆಗಿಯಿರಿ, ಆದರೆ, ಗೌರವಯುತವಾಗಿ ತೆಗೆಯಿರಿ. ಇಲ್ಲವಾದರೆ ನಾನು ಏನು ಎಂಬುದನ್ನು ತೋರಿಸುತ್ತೇನೆ. ನಾನು ರೆಬೆಲ್ ಅಭ್ಯರ್ಥಿಯಾಗಿ ನಿಂತರೆ 10 ಸ್ಥಾನ ಗೆಲ್ಲಿಸಿ ಕೊಡುತ್ತೇನೆ' ಎಂದು ಎಚ್ಚರಿಕೆ ನೀಡಿದ್ದರು.
ಇದೇ ವೇಳೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಿರುದ್ಧ ಕೆಂಡಾಮಂಡಲರಾಗಿ ಕೆಜಿಎಫ್ ಬಾಬು, 'ಕೆಪಿಸಿಸಿಯಲ್ಲಿ ತಪ್ಪು ನಡೆಯುತ್ತಿದೆ. ಯುವಕರು, ಮಹಿಳೆಯರು ಹಾಗೂ ಕಾರ್ಯಕರ್ತರು ಬಂದರೆ ಮರ್ಯಾದೆ ಕೊಡುವುದಿಲ್ಲ. ನನಗೆ ಕೆಪಿಸಿಸಿ ಕಚೇರಿಗೆ ಬಿಡಬೇಡ ಅಂತ ಸಲೀಂ ಅಹಮ್ಮದ್ ಹೇಳಿದ್ದಾರೆ. ಆದರೆ, ಅವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ. ಸಲೀಂ ಅಹಮ್ಮದ್ ಕೈಯ್ಯಲ್ಲಿ ಏನಾಗುತ್ತದೆ. ಅವರಿಗೆ ನಾಲ್ಕು ಜನರ ಪರಿಚಯ ಇಲ್ಲ. ಅವರನ್ನು ತೆಗೆದು ಹಾಕಿದರೆ ಎಲ್ಲ ಸರಿಯಾಗುತ್ತದೆ. ನಾನು ಏನೂ ತಪ್ಪಾಗಿ ಮಾತನಾಡಿಲ್ಲ' ಎಂದು ಗುಡುಗಿದ್ದರು.