ಬೆಂಗಳೂರು:ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿಗೆ ರೆಸ್ಟೋರೆಂಟ್ ಆಹುತಿಯಾಗಿರುವ ಘಟನೆ ಇಲ್ಲಿನ ಕೋರಮಂಗಲದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ. ಕೋರಮಂಗಲ ಸಮೀಪದ ಮಡ್ ಪೈಪ್ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಮೇಲಂತಸ್ತು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡದಿಂದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಡುಗೆ ಅನಿಲ ಸೋರಿಕೆಯೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ನಿರ್ಲಕ್ಷ್ಯ ಹಾಗೂ ಅಜಾಗರೂಕತೆ ವಹಿಸಿದ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಮಾಲೀಕ ಕರಣ್ ಜೈನ್ ಎಂಬುವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೊತೆಗೆ ವಿಚಾರಣೆಗೆ ಹಾಜರಾಗುವಂತೆ ಮಾಲೀಕರಿಗೆ ನೋಟಿಸ್ ಜಾರಿ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕರಣ್ ಜೈನ್ ಕಳೆದ ಹಲವು ವರ್ಷಗಳಿಂದ ರೆಸ್ಟೋರೆಂಟ್ ನಡೆಸುತ್ತಿದ್ದರು. ನಾಲ್ಕು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ರೆಸ್ಟೋರೆಂಟ್ ಇತ್ತು. ಮೇಲಂತಸ್ತಿಗೆ ರೂಪ್ ಟಾಪ್ ಶೆಲ್ಟರ್ ಹಾಕಿ ಅದರ ಒಂದು ಭಾಗದಲ್ಲಿ ಅಡುಗೆ ಕೋಣೆ ನಿರ್ಮಿಸಲಾಗಿತ್ತು. ಎಂದಿನಂತೆ ಮಧ್ಯಾಹ್ನ 12 ಗಂಟೆ ವೇಳೆಗೆ ರೆಸ್ಟೋರೆಂಟ್ ಓಪನ್ ಮಾಡಬೇಕಿತ್ತು. ಈ ವೇಳೆ, ಉತ್ತರ ಭಾರತ ಮೂಲದ ಜೆ.ಪಿ. ನಗರದಲ್ಲಿ ವಾಸವಾಗಿದ್ದ ಪ್ರೇಮ್ ಸಿಂಗ್ ಸೌದ ಎಂಬುವರು ರೆಸ್ಟೋರೆಂಟ್ನಲ್ಲೇ ಇದ್ದರು. ಅಡುಗೆ ತಯಾರಿ ಹಂತದಲ್ಲಿರುವಾಗಲೇ ಅಡುಗೆ ಅನಿಲ ಸೋರಿಕೆಯಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ರೆಸ್ಟೋರೆಂಟ್ ತುಂಬಾ ಆವರಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಣ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದ:ಘಟನೆಯಲ್ಲಿ ನಾಲ್ಕಕ್ಕೂ ಅಧಿಕ ಸಿಲಿಂಡರ್ಗಳು ಸ್ಫೋಟಗೊಂಡಿದ್ದರಿಂದ ಇಡೀ ರೆಸ್ಟೋರೆಂಟ್ಗೆ ಬೆಂಕಿ ವ್ಯಾಪಿಸಿ, ಅಲ್ಲಿದ್ದ ಪೀಠೋಪಕರಣ ಹಾಗೂ ಇತರ ವಸ್ತುಗಳೂ ಸುಟ್ಟು ಕರಕಲಾಗಿದೆ. ರೆಸ್ಟೋರೆಂಟ್ನಲ್ಲಿ ಉಳಿದುಕೊಂಡಿದ್ದ ಪ್ರೇಮ್ ಸಿಂಗ್ ಜೀವ ಉಳಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಜಿಗಿದಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು. ಗಂಭೀರ ಗಾಯಗೊಂಡಿದ್ದ ಪ್ರೇಮ್ ಸಿಂಗ್ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆತನ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕ ಇಲಾಖೆ ಎಡಿಜಿಪಿ ಹರಿಶೇಖರನ್ ಮಾಹಿತಿ ಎಡಿಜಿಪಿ ಪ್ರತಿಕ್ರಿಯೆ:ಅಗ್ನಿ ದುರಂತ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿಶಾಮಕ ಇಲಾಖೆ ಎಡಿಜಿಪಿ ಹರಿಶೇಖರನ್, ''ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಘಟನೆ ಹಿನ್ನೆಲೆ 8 ಅಗ್ನಿಶಾಮಕ ವಾಹನಗಳಿಂದ ಸ್ಥಳಕ್ಕೆ ಬಂದು ಅಗ್ನಿ ನಂದಿಸಲಾಗಿದೆ. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ರೆಸ್ಟೋರೆಂಟ್ ಇದೆ. ಅದರ ಒಂದು ಭಾಗದಲ್ಲಿ ಅಡುಗೆ ಮನೆಯಿದೆ. ಆ ಜಾಗದಲ್ಲಿ 15 ಸಿಲಿಂಡರ್ ಇದ್ದವು. ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಸಿಲಿಂಡರ್ ಬ್ಲಾಸ್ಟ್ ಆಗಿವೆ. ಬೆಂಕಿ ವ್ಯಾಪ್ತಿಸುತ್ತಿದ್ದಂತೆ ಒಬ್ಬ ಮೇಲಿಂದ ಕೆಳಗೆ ಜಿಗಿದಿದ್ದಾನೆ. ಅಲ್ಲದೇ ದುರಂತದಲ್ಲಿ ಕಟ್ಟಡದ ಪಕ್ಕದಲ್ಲೇ ಪಾರ್ಕಿಂಗ್ನಲ್ಲಿ ಇದ್ದ ಒಂದು ಕಾರು, ನಾಲ್ಕು ಬೈಕ್ಗಳ ಮೇಲೆಯೂ ಬೆಂಕಿಯಿದ್ದ ಫೈಬರ್ ಶೀಟ್ಗಳು ಬಿದ್ದು ವಾಹನಗಳಿಗೆ ಹಾನಿಯಾಗಿದೆ'' ಎಂದು ತಿಳಿಸಿದರು.
ಇದನ್ನೂ ಓದಿ :ಕರ್ತವ್ಯನಿರತ ಮಹಿಳಾ ಪಿಎಸ್ಐ ಮೇಲೆ ದರ್ಪ ತೋರಿದ ಆರೋಪಿ ಬಂಧನ