ಅತ್ತಿಬೆಲೆ ಪಟಾಕಿ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಅವಘಡ ಆನೇಕಲ್ (ಬೆಂಗಳೂರು):ಪಟಾಕಿ ದಾಸ್ತಾನು ಮಳಿಗೆಯಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ಆನೇಕಲ್ ತಾಲೂಕಿನ ಬೆಂಗಳೂರು-ಹೊಸೂರು ಅಂತಾರಾಜ್ಯ ಹೆದ್ದಾರಿಯಲ್ಲಿನ ಅತ್ತಿಬೆಲೆಯಲ್ಲಿ ಶನಿವಾರ ಸಂಭವಿಸಿದೆ. ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ.
ಅತ್ತಿಬೆಲೆ ಗಡಿಯಲ್ಲಿನ ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ಮಳಿಗೆಯಲ್ಲಿ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿ ಕಿಡಿಯಿಂದ ಇಡೀ ಅಂಗಡಿ ಸ್ಫೋಟಗೊಂಡು ಅವಘಡ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಅಂಗಡಿಯಲ್ಲಿ 20 ಮಂದಿ ಕಾರ್ಮಿಕರು ಇದ್ದರು. ಇವರ ಪೈಕಿ ಅವಘಡದ ಬಳಿಕ ನಾಲ್ವರು ತಪ್ಪಿಸಿಕೊಂಡು ಹೊರಬಂದಿದ್ದಾರೆ. 16 ಜನರು ಪಟಾಕಿ ಅಂಗಡಿಯ ಒಳಗೆ ಸಿಲುಕಿರುವ ಶಂಕೆ ಇದೆ. ಈಗಾಗಲೇ 12 ಮೃತದೇಹಗಳು ಪತ್ತೆ ಆಗಿವೆ. ಗೋದಾಮಿನಲ್ಲಿ ಬೆಂಕಿ ಇನ್ನೂ ಸಂಪೂರ್ಣ ಹತೋಟಿಗೆ ಬಂದಿಲ್ಲ. ನವೀನ್ ಎಂಬುವರಿಗೆ ಸೇರಿದ ಬಾಲಾಜಿ ಕ್ರಾಕರ್ಸ್ ಎಂಬ ಪಟಾಕಿ ಅಂಗಡಿ ಇದಾಗಿದೆ ಎಂದು ತಿಳಿದುಬಂದಿದೆ.
ಪ್ರತಿ ವರ್ಷದಂತೆ ದೀಪಾವಳಿಗಾಗಿ ವಿಶೇಷ ಪಟಾಕಿ ಲೋಡ್ ಲಾರಿಯಿಂದ ಇಳಿಸುವ ಸಂದರ್ಭದಲ್ಲಿ ಈ ಅಚಾತುರ್ಯ ಸಂಭವಿಸಿದೆ. ಅಲ್ಲದೆ ಇನ್ನೂ ಕೆಲವರಿಗೆ ಗಾಯಗಳಾಗಿವೆ. ಘಟನೆ ಬಗ್ಗೆ ಮಾಹಿತಿ ತಿಳಿದ ಅತ್ತಿಬೆಲೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಥಳೀಯರೂ ಕೂಡ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು, ಅಂಗಡಿ ಸುಟ್ಟು ಕರಕಲಾಗಿದೆ.
ಅತ್ತಿಬೆಲೆ ಪಟಾಕಿ ಅಂಗಡಿಯಲ್ಲಿ ಬೆಂಕಿ ಅವಘಡ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿ ಆಗುವುದರೊಂದಿಗೆ 1 ಕ್ಯಾಂಟರ್, 2 ಬೊಲೆರೋ, 4 ದ್ವಿಚಕ್ರ ವಾಹನಗಳು ಸಹ ಸುಟ್ಟಿವೆ. ದೊಡ್ಡ ಮಳಿಗೆ ಆಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೂ ಪಟಾಕಿ ಅಂಗಡಿ ದುರಂತ ಎಫೆಕ್ಟ್ ತಟ್ಟಿದ್ದು, ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ''ಬಾಲಾಜಿ ಕ್ರಾಕರ್ಸ್ ದಾಸ್ತಾನು ಮಳಿಗೆಗೆ ಕ್ಯಾಂಟರ್ ವಾಹನದಿಂದ ಪಟಾಕಿ ಇಳಿಸುವಾಗ ಅವಘಡ ಸಂಭವಿಸಿದೆ. ಕೂಡಲೇ ಮಳಿಗೆ ಮತ್ತು ಗೋದಾಮಿಗೆ ಬೆಂಕಿ ಜ್ವಾಲೆ ಆವರಿಸಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಸದ್ಯ ಶೇಕಡಾ 80ರಷ್ಟು ಬೆಂಕಿ ನಿಯಂತ್ರಣ ಮಾಡಲಾಗಿದೆ. ಘಟನೆಯಲ್ಲಿ ಮಳಿಗೆಯ ಮಾಲೀಕ ನವೀನ್ಗೂ ಸುಟ್ಟ ಗಾಯಗಳಾಗಿದೆ. ಮಳಿಗೆ ಪರವಾನಗಿ ಬಗ್ಗೆಯು ಪರಿಶೀಲನೆ ಮಾಡಲಿದ್ದೇವೆ'' ಎಂದು ಹೇಳಿದ್ದಾರೆ.
ಸಿಎಂ ಸಂತಾಪ:''ಬೆಂಗಳೂರು ನಗರ ಜಿಲ್ಲೆ ಆನೇಕಲ್ ಸಮೀಪ ಅತ್ತಿಬೆಲೆಯ ಪಟಾಕಿ ಸಂಗ್ರಹ ಮಳಿಗೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 12 ಮಂದಿ ಮೃತಪಟ್ಟ ಸುದ್ದಿ ತಿಳಿದು ಅತೀವ ನೋವಾಯಿತು. ದುರ್ಘಟನೆ ನಡೆದ ಸ್ಥಳಕ್ಕೆ ನಾಳೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದೇನೆ. ಮೃತ ಕಾರ್ಮಿಕರ ಕುಟುಂಬಕ್ಕೆ ನನ್ನ ಸಂತಾಪಗಳು,'' ಎಂದು ಸಿಎಂ ಎಕ್ಸ್ ಪೋಸ್ಟ್ ಮೂಲಕ ಸಾಂತ್ವನ ತಿಳಿಸಿದ್ದಾರೆ.