ನೆಲಮಂಗಲ (ಬೆಂಗಳೂರು) : ಚಲಿಸುತ್ತಿದ್ದ ಬಿಎಂಟಿಸಿ ಬಸ್ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಎಚ್ಚೆತ್ತ ಚಾಲಕ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ನೆಲಮಂಗಲ ನಗರದದ ಜೆಪಿ ಆಸ್ಪತ್ರೆಯ ಮುಂಭಾಗದಲ್ಲಿ ಘಟನೆ ನಡೆದಿದೆ. ಬಿಎಂಟಿಸಿ ಬಸ್ನಲ್ಲಿ 5 ಪ್ರಯಾಣಿಕರಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ.
ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋದಿಂದ ಬಿಎಂಟಿಸಿ ನೆಲಮಂಗಲ ನಗರಕ್ಕೆ ಬರುವ ವೇಳೆ ಬೆಂಕಿ ಕಾಣಿಸಿಕೊಂಡ ಕ್ಷಣವೇ ಚಾಲಕ ಬಸ್ ನಿಲ್ಲಿಸಿದ್ದಾನೆ. ಹಿಂದೆ ಬರುತ್ತಿದ್ದ ಬಸ್ ನಿಲ್ಲಿಸಿ ಅದರಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಫರ್ನಿಚರ್ ಶೋರೂಂ ಸುಟ್ಟು ಕರಕಲು :ಮತ್ತೊಂದೆಡೆ ಭಾನುವಾರ ತಡರಾತ್ರಿ ಹೊರಮಾವು ಬಳಿಯ ಔಟರ್ ರಿಂಗ್ ರೋಡ್ನಲ್ಲಿ ಫರ್ನಿಚರ್ ಶೋ ರೂಂ ಅಗ್ನಿಗಾಹುತಿಯಾಗಿದೆ. ಐದು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿದ್ದ ಫರ್ನಿಚರ್ ಶೋರೂಂಗೆ ಬೆಂಕಿ ಆವರಿಸಿತ್ತು. ಕಟ್ಟಡದಲ್ಲಿ ಕೋಚಿಂಗ್ ಸೆಂಟರ್ ಹಾಗೂ ಖಾಸಗಿ ಕಂಪನಿಯೊಂದು ಇತ್ತು. ರಾತ್ರಿ 12 ಗಂಟೆ ಸುಮಾರಿಗೆ ಫರ್ನಿಚರ್ ಶೋರೂಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು.
ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಟ್ಟಡದಲ್ಲಿ ಸಿಲುಕಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ರಕ್ಷಿಸಿದ್ದಾರೆ. ಫರ್ನಿಚರ್ ಶೋರೂಮಿನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದರಿಂದ ಅಗ್ನಿ ಅವಘಡ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂದ ನಾಲ್ಕು ಅಗ್ನಿಶಾಮಕದಳದ ಸಿಬ್ಬಂದಿ ಸಂಪೂರ್ಣವಾಗಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :ಬಿಎಂಟಿಸಿ ಬಸ್ನಲ್ಲಿ ಬೆಂಕಿ: ನಿದ್ರಿಸುತ್ತಿದ್ದ ನಿರ್ವಾಹಕ ಸಜೀವ ದಹನ