ಬೆಂಗಳೂರು :ರಾಜ್ಯದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಈ ಹಿಂದೆ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದ್ದ ಪಟಾಕಿ ದುರಂತದ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರು ಜಿಲ್ಲೆಯಲ್ಲಿ ಮತ್ತೊಂದು ಬೆಂಕಿ ಅವಘಡ ನಡೆದಿದೆ. ಆಟಿಕೆ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಕೆ. ಆರ್ ಮಾರ್ಕೆಟ್ ಠಾಣಾ ವ್ಯಾಪ್ತಿಯ ಕುಂಬಾರಪೇಟೆಯಲ್ಲಿ ಭಾನುವಾರ ನಡೆದಿದೆ. ಕಟ್ಟಡದ ಮೂರನೇ ಮಹಡಿಯಲ್ಲಿದ್ದ ಗೋದಾಮಿನಲ್ಲಿ ಅವಘಡ ಉಂಟಾಗಿದ್ದು, ನಂತರ ನಾಲ್ಕನೇ ಮಹಡಿಗೂ ಬೆಂಕಿ ವ್ಯಾಪಿಸಿದೆ. ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳದಲ್ಲಿ ಐದು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ.
ಮತ್ತೊಂದೆಡೆ ಅಗ್ನಿಶಾಮಕ ದಳದ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಒಂದು ಗಂಟೆಯಾದರೂ ಸಹ ಸಿಬ್ಬಂದಿ ಬರಲು ವಿಳಂಬವಾಗಿದೆ. ಅಲ್ಲದೇ ಸ್ವಲ್ಪ ಸಮಯ ಕಾರ್ಯಾಚರಣೆ ನಡೆಸಿದ ಬಳಿಕ ನೀರು ಖಾಲಿಯಾಗಿದೆ ಎನ್ನುತ್ತಿದ್ದಾರೆ. ಇದರಿಂದಾಗಿ ಕಟ್ಟಡದ ನಾಲ್ಕನೇ ಮಹಡಿಗೂ ಬೆಂಕಿ ವ್ಯಾಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಅಗ್ನಿಶಾಮಕದಳದ ಸಿಬ್ಬಂದಿಯಿಂದ ಬೆಂಕಿ ಹತೋಟಿಗೆ ತರುವ ಕಾರ್ಯ ಮುಂದುವರೆದಿದೆ.
ಐದಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ (ಪ್ರತ್ಯೇಕ ಘಟನೆ): ದೀಪಾವಳಿ ಹಬ್ಬದ ದಿನದಂದೇ ಫರ್ನಿಚರ್ ಶೋ ರೂಂ ಅಗ್ನಿಗಾಹುತಿಯಾದ ಘಟನೆ ಭಾನುವಾರ ತಡರಾತ್ರಿ ಹೊರಮಾವು ಬಳಿಯ ಔಟರ್ ರಿಂಗ್ ರೋಡ್ನಲ್ಲಿ ನಡೆದಿತ್ತು. ಐದು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲನೇ ಮಹಡಿಯಲ್ಲಿದ್ದ ಫರ್ನಿಚರ್ ಶೋರೂಂ ಅಗ್ನಿಗಾಹುತಿಯಾಗಿತ್ತು.