ಬೆಂಗಳೂರು:ನಿನ್ನೆ ಒಂದೆಡೆ ಆರ್.ಆರ್.ನಗರದ ಮತ ಎಣಿಕೆ. ಮತ್ತೊಂದೆಡೆ ಗುಡ್ಡದಹಳ್ಳಿಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ. ಬೆಂಕಿ ಅನಾಹುತದ ಬಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ, ಮತ ಎಣಿಕೆ ಬಳಿ ನಿಯೋಜನೆಗೊಂಡಿದ್ದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ಪೊಲೀಸರು ಸ್ಥಳಕ್ಕೆ ಬಂದಾಗ ಬೆಂಕಿಯ ಕೆನ್ನಾಲಿಗೆ ವ್ಯಾಪಕವಾಗಿ ಹರಡಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದರು.
ಕಳೆದ 25 ಗಂಟೆಗಳ ಸತತ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸದ್ಯ ಗೋದಾಮಿನ ಒಂದು ಕಟ್ಟಡದ ಸೀಲಿಂಗ್ ಕುಸಿದಿರುವ ಕಾರಣ ಕೆಳ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಹೊಗೆಯಾಡುತ್ತಿದ್ದು, ಸಂಜೆಯವರೆಗೆ ಇರಬಹುದೆಂದು ಅಗ್ನಿಶಾಮಕ ಸಿಬ್ಬಂದಿ ಅಭಿಪ್ರಾಯ ಪಟ್ಟಿದ್ದಾರೆ.
ಹೊಸಗುಡ್ಡದಹಳ್ಳಿಯ ಕುವೆಂಪುನಗರದ ಬಳಿ ಸುಮಾರು 20 ವರ್ಷಗಳಿಂದ ರೇಖಾ ಕೆಮಿಕಲ್ ಫ್ಯಾಕ್ಟರಿ ಗೋದಾಮು ಇದ್ದು, ಪರವಾನಗಿ ಇಲ್ಲದೇ ಫ್ಯಾಕ್ಟರಿ ನಡೆಸುತ್ತಿದ್ದುದಾಗಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಗೋದಾಮಿನ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಹಾಗೆ ತಲೆ ಮರೆಸಿಕೊಂಡಿರುವ ಮಾಲೀಕರಿಗೆ ಪಶ್ಚಿಮ ವಿಭಾಗದ ಪೊಲೀಸರ ತಂಡ ಶೋಧ ಮುಂದುವರೆಸಿದೆ. ಇದೇ ರೇಖಾ ಕೆಮಿಕಲ್ಸ್ ಫ್ಯಾಕ್ಟರಿ ಕುಂಬಳಗೋಡು ಬಳಿ ಇದೆ. ಇದಕ್ಕೆ ಪರವಾನಗಿ ಪಡೆದಿದ್ದು, ಇಲ್ಲಿ ಸಂಗ್ರಹಿಸಿರುವ ಸ್ಯಾನಿಟೈಸರ್, ಕೆಮಿಕಲ್ ತಂದು ಹೊಸಗುಡ್ಡದ ಹಳ್ಳಿ ಬಳಿ ಶೇಖರಣೆ ಮಾಡಲಾಗ್ತಿತ್ತು ಎನ್ನಲಾಗಿದೆ.
ಫ್ಯಾಕ್ಟರಿಗೆ ಹೊಂದಿಕೊಂಡಂತೆ ಬಹಳಷ್ಟು ಮನೆಗಳಿವೆ. ವಾಯುಮಾಲಿನ್ಯ ಹೆಚ್ಚಾಗಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಉದ್ಭವಿಸುವ ಸಾಧ್ಯತೆಗಳಿವೆ. ಹಾಗಾಗಿ, ಘಟನಾ ಸ್ಥಳದಿಂದ 200 ಮೀಟರ್ ವ್ಯಾಪ್ತಿಯ 50 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಬೆಂಕಿ ಹೊಗೆಯಾಡುತ್ತಿದ್ದು, ಸ್ಥಳದಲ್ಲೇ ಅಗ್ನಿಶಾಮಕ ಸಿಬ್ಬಂದಿ ಮೊಕ್ಕಾಂ ಹೂಡಿದೆ.
ಅವಘಡದಲ್ಲಿ ಜೀವ ಉಳಿದರೆ ಸಾಕು ಎಂದು ಓಡಿದ್ದ ಜನರು, ಮರಳಿ ಮನೆ ಬಳಿ ಬಂದು ನೋಡಿದಾಗ ಎಲ್ಲ ಸುಟ್ಟು ಕರಕಲಾಗಿವೆ. ಇದರಿಂದ ನೊಂದ ಜನರು, ಕಂಪನಿ ಮಾಲೀಕನ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಗಳ ಮದುವೆ ಸಂಭ್ರಮದಲ್ಲಿದ್ದವರಿಗೆ ಶಾಕ್
ಕೆಮಿಕಲ್ ಪ್ಯಾಕ್ಟರಿ ಬಳಿ ಎಂ ಮಣಿ ಅವರು ವಾಸವಿದ್ದು, ಮೂರು ಮಹಡಿಗಳ ಕಟ್ಟಡದಲ್ಲಿ ಮನೆಗಳನ್ನ ಭೋಗ್ಯಕ್ಕೆ ನೀಡಿದ್ರು.. ಹಾಗೆ ನೆಲ ಮಹಡಿಯಲ್ಲಿ ಪೀಠೋಪಕರಣ ಉದ್ಯಮ ನಡೆಸ್ತಿದ್ರು. ಇಂದು ಮಗಳ ಮದುವೆಯಿದ್ದ ಕಾರಣ ಮನೆಯ ಮೇಲ್ಮಹಡಿಯಲ್ಲಿ ಸಮಾರಂಭಕ್ಜೆ ಬೇಕಾದ ವಸ್ತುಗಳನ್ನ ಇರಿಸಲಾಗಿತ್ತು ಸದ್ಯ ವಸ್ತು, ಪೀಠೋಪಕರಣಗಳೆಲ್ಲ ಕರಕಲಾಗಿದ್ದು, ದಿಕ್ಕು ತೋಚದೆ ಕಂಗಲಾಗಿದ್ದಾರೆ.
80 ಸಾವಿರ ಹಣ ಸುಟ್ಟು ಕರಕಲು
ಪ್ರಸನ್ನ ಎಂಬುವವರು ಸಹೋದರಿ ಜೊತೆ ವಾಸವಿದ್ದು, ನಿನ್ನೆ ಮುಂಜಾನೆ ಮನೆಗೆ ಬಾಗಿಲು ಹಾಕಿ ಕೆಲಸಕ್ಕೆ ತೆರಳಿದ್ರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ, ಫ್ರಿಡ್ಜ್, ಎಲೆಕ್ಟ್ರಿಕಲ್ ವಸ್ತು, ಬಟ್ಟೆ ಪ್ರಮುಖವಾಗಿ 80 ಸಾವಿರ ನಗದು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.