ಬೆಂಗಳೂರು:ಜನವರಿ 1 ರಿಂದ ಮೇ ಕೊನೆಯವರೆಗೆ 1,807 ಅಗ್ನಿ ಅವಘಡಕ್ಕೆ ಸಂಬಂಧಿಸಿದ ಕರೆಗಳನ್ನು ಸ್ವೀಕರಿಸಿದ್ದೇವೆ. ಏಪ್ರಿಲ್ವರೆಗೆ ಹೇಳುವುದಾದರೆ ಹುಲ್ಲಿನ ಬಣವೆ, ಸ್ಕ್ರ್ಯಾಪ್ ಬೆಂಕಿ ಪ್ರಕರಣಗಳೇ ಸಾಕಷ್ಟು ದಾಖಲಾಗಿವೆ ಎಂದು ಪಶ್ಚಿಮ ವಿಭಾಗದ ಮುಖ್ಯ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ಈಟಿವಿ ಭಾರತಕ್ಕೆ ತಿಳಿಸಿದರು.
ಬೇಸಿಗೆ ಸಮಯದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ. ಆ ವೇಳೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತೆರಳಿ ಬೆಂಕಿ ಶಮನ ಮಾಡುವ ಕಾರ್ಯಕ್ಕೆ ಮುಂದಾಗುತ್ತಾರೆ. ಆದ್ರೆ ಕೋವಿಡ್ ಲಾಕ್ಡೌನ್ನಿಂದಾಗಿ ಪ್ರತೀ ವರ್ಷ ಸಂಭವಿಸುತ್ತಿದ್ದಷ್ಟು ಬೆಂಕಿ ದುರಂತಗಳು ಈ ಬಾರಿ ಸಂಭವಿಸಿಲ್ಲ.
ನಗರದಲ್ಲಿ ಈ ವರ್ಷದ ಬೇಸಿಗೆಯಲ್ಲಿ ದಾಖಲಾದ ಅಗ್ನಿ ಅವಘಡ ಪ್ರಕರಣಗಳ ಬಗ್ಗೆ ಪಶ್ಚಿಮ ವಿಭಾಗದ ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ್ ಮಾಹಿತಿ ನೀಡಿದ್ದಾರೆ. ಮನೆಗಳಲ್ಲಿ ಸಂಭವಿಸುವ ಸಣ್ಣ-ಪುಟ್ಟ ಬೆಂಕಿ ಪ್ರಕರಣಗಳು, ಗ್ಯಾಸ್ ಲೀಕ್ ಪ್ರಕರಣಗಳು, ಟ್ರಾನ್ಸ್ಫಾರ್ಮರ್ ಅನಾಹುತಗಳು ದಾಖಲಾಗಿರುವುದು ಬಿಟ್ಟರೆ ಯಾವುದೇ ಭೀಕರ ಬೆಂಕಿ ದುರಂತಗಳು ರಾಜಧಾನಿಯಲ್ಲಿ ಸಂಭವಿಸಿಲ್ಲ. ಮಳೆ ಕೂಡ ಮೇ ತಿಂಗಳಲ್ಲಿ ಬಂದಿರುವುದರಿಂದ ಬೆಂಕಿ ಅನಾಹುತದ ಕರೆಗಳು ಸಾಕಷ್ಟು ಕಡೆಮೆಯಾಗಿದೆ ಎಂದರು.
ನೈರ್ಮಲೀಕರಣ:
ಕಳೆದ ಬೇಸಿಗೆ ಸಮಯದಲ್ಲಿ ಕೂಡ ಕೋವಿಡ್ ಸಾಂಕ್ರಾಮಿಕ ರೋಗ ಇದ್ದು, ಸ್ವಚ್ಛತೆಗೆ ಒತ್ತು ನೀಡಿದ್ದೆವು. ಈ ಬಾರಿ ಕೂಡ ಮೇ. 3 ರಿಂದ 24 ಬೆಂಕಿ ನಂದಿಸುವ ವಾಹನಗಳನ್ನು ಉಪಯೋಗಿಸಿಕೊಂಡು ನೈರ್ಮಲೀಕರಣ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಮಾಹಿತಿ ನೀಡಿದರು.
ಸದ್ಯ ಬಹಳ ಕಡಿಮೆ ಸಂಖ್ಯೆಯ ಕಾರ್ಮಿಕರಿಂದ ಕಾರ್ಖಾನೆಗಳು ಕಾರ್ಯಾಚರಿಸುತ್ತಿವೆ. ಕೋವಿಡ್ ಲಾಕ್ಡೌನ್ನಿಂದಾಗಿ ಜನರು ಮನೆಯಲ್ಲಿ ಇದ್ದು, ಅಷ್ಟು ಕೆಲಸ ಕಾರ್ಯದಲ್ಲಿ ನಿರತರಾಗದೇ ಇರೋದ್ರಿಂದ ಬೆಂಕಿ ಅನಾಹುತಗಳು ಕಡಿಮೆಯಾಗಿರುವುದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಳೆದ ಬಾರಿ ಕೂಡ ಕೋವಿಡ್ ಕೆಲಸ ಕಾರ್ಯದಲ್ಲಿ ಅಗ್ನಿಶಾಮಕ ದಳದಿಂದ ನಿರತರಾಗಿದ್ದೆವು. ಮೇ. 3 ರಂದು ಸರ್ಕಾರಿ ಆದೇಶದ ಮೇರೆಗೆ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ 24 ವಾಹನಗಳು ನಗರದಾದ್ಯಂತ ಸ್ವಚ್ಛತಾ ಕಾರ್ಯಾಚರಣೆ ನೆಡೆಸಿವೆ. ವಿಭಾಗ ಮಟ್ಟದಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದ್ದೇವೆ. ಕೋವಿಡ್ ಕಂಟ್ರೋಲ್ ರೂಮ್ ಎಂದು ಕೂಡ ನಮ್ಮ ಅಗ್ನಿಶಾಮಕ ದಳದ ಕೇಂದ್ರ ಕಚೇರಿಯಲ್ಲಿ ಮಾಡಿದ್ದೇವೆ. ಯಾರು ಕೋವಿಡ್ ರೋಗಕ್ಕೆ ತುತ್ತಾಗುತ್ತಾರೋ ಅವರ ನೆರವಿಗೆ ಇಲಾಖೆ ಧಾವಿಸುತ್ತದೆ. ಪ್ರತಿದಿನ ಎರಡರಿಂದ ಮೂರು ಪಾಸಿಟಿವ್ ಪ್ರಕರಣಗಳು ನಮ್ಮ ಇಲಾಖೆಯಲ್ಲಿ ಪತ್ತೆಯಾಗುತ್ತಿವೆ ಎಂದು ಹೇಳಿದರು.