ನೆಲಮಂಗಲ (ಬೆಂಗಳೂರು): ಹೈ ಟೆನ್ಷನ್ ವಿದ್ಯುತ್ ತಂತಿ ಕಾರ್ಖಾನೆ ಮೇಲೆ ಬಿದ್ದು ಹೊತ್ತಿ ಉರಿದಿರುವ ಘಟನೆ ಇಂದು ನೆಲಮಂಗಲ ತಾಲೂಕಿನ ಟಿ.ಬೇಗೂರು ಬಳಿಯ ರೆಸ್ಟೋಲೇಕ್ಸ್ ಕಾರ್ಖಾನೆಯಲ್ಲಿ ಸಂಭವಿಸಿದೆ. ಬೆಂಕಿ ಕೆನ್ನಾಲಿಗೆಗೆ ಕಾರ್ಖಾನೆಯ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಬೂದಿಯಾಗಿವೆ. ವಿಷಯ ತಿಳಿದು ಕೂಡಲೇ ನೆಲಮಂಗಲ ಅಗ್ನಿಶಾಮಕ ಠಾಣಾ ವ್ಯಾಪ್ತಿಯ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ.
11 ಕೆವಿ ಹೈ ಟೆನ್ಷನ್ ವಿದ್ಯುತ್ ತಂತಿ ಕಾರ್ಖಾನೆ ಮೇಲೆ ಬಿದ್ದು, ಶಾಟ್೯ ಸರ್ಕ್ಯೂಟ್ ಆಗಿದೆ. ಆಗ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿಬಂದಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ.. ನಡು ರಸ್ತೆಯಲ್ಲಿ ಹೊತ್ತಿ ಉರಿದ ವಾಹನ
ಹಾಸನದ ಘಟೆನಯೊಂದರಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ. ನಗರದ ಡಿಸಿ ಕಚೇರಿ ಮುಂಭಾಗದ ಬಿ.ಎಂ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಕಾರನ್ನು ರಸ್ತೆ ಮಧ್ಯೆ ನಿಲ್ಲಿಸಿ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಯಾಣಿಕರು ಕಾರಿನಿಂದ ಹೊರಬರುತ್ತಿದ್ದಂತೆ ಕಾರು ಹೊತ್ತಿ ಉರಿದಿದೆ. ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಕಾರು ಬೆಂಕಿಗಾಹುತಿಯಾಗಿದೆ. ಹಾಸನದ ಉದಯಗಿರಿ ಬಡಾವಣೆಯ ಕಂದಾಯ ಇಲಾಖೆಯ ನೌಕರ ರಾಜೀವ್ ಎಂಬುವರಿಗೆ ಸೇರಿದ ಕಾರು ಇದಾಗಿದೆ. ಅವರು ಪತ್ನಿ ಹಾಗೂ ಪುತ್ರನೊಂದಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿವೆ. ಘಟನೆಯಿಂದ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಯಿಕ್ಕೋಡ್ (ಕೇರಳ): ಇಲ್ಲಿಯ ಕಲ್ಲೈ ರಸ್ತೆಯಲ್ಲಿರುವ ಜಯಲಕ್ಷ್ಮಿ ಸಿಲ್ಕ್ಸ್‌ನ ಕಟ್ಟಡದಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಮೂರನೇ ಮಹಡಿಯಲ್ಲಿರುವ ಸೀರೆ ಅಂಗಡಿಯಲ್ಲಿ ಹಠಾತ್ ಬೆಂಕಿ ಕಾಣಿಸಕೊಂಡಿದೆ. ಅಲ್ಲದೇ ಬೆಂಕಿಯ ಕಿಡಿ ಹೊರ ಹಾರಿ ಕಟ್ಟಡದ ಮುಂಭಾಗದಲ್ಲಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿಗೆ ತಗುಲಿದೆ. ಪರಿಣಾಮ 2 ಕಾರುಗಳು ಸುಟ್ಟು ಕರಕಲಾಗಿವೆ. ಎರಡನೇ ಮಹಡಿಗೂ ಬೆಂಕಿ ವ್ಯಾಪಿಸಿಕೊಂಡಿತ್ತು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಸೀರೆಗಳು ಸುಟ್ಟು ಕರಕಲಾಗಿವೆ. ಘಟನೆಯ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ 10 ಅಗ್ನಿಶಾಮಕ ವಾಹನಗಳು ಆಗಮಿಸಿವೆ. ಒಂದೂವರೆ ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ಸೊಳ್ಳೆ ಕಾಯಿಲ್ ಹಾಸಿಗೆಗೆ ಬಿದ್ದು ಬೆಂಕಿ ಅನಾಹುತ: ಒಂದೇ ಕುಟುಂಬದ 6 ಮಂದಿ ಸಾವು