ಬೆಂಗಳೂರು:ಬಿಬಿಎಂಪಿ ಕಚೇರಿ ಕಟ್ಟಡದ ಆವರಣದಲ್ಲಿರುವ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಮತ್ತು ಕಚೇರಿ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲು ಹಲಸೂರು ಗೇಟ್ ಠಾಣಾ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮುಖ್ಯ ಇಂಜಿನಿಯರ್, ಹಾಗೂ ಪ್ರಕರಣದ ದೂರುದಾರರಾಗಿರುವ ಪ್ರಹ್ಲಾದ್ ಅವರಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಈಗಾಗಲೇ ತಮ್ಮ ನೇತೃತ್ವದ ತಂಡದಿಂದ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಆಂತರಿಕ ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪ್ರಯೋಗಾಲಯದ ಮೂವರು ಸಿಬ್ಬಂದಿಯನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸದ್ಯ ಮುಖ್ಯ ಎಂಜಿನಿಯರ್ ವಿಚಾರಣೆ ನಡೆಸಲಿರುವ ಪೊಲೀಸರು, ನಂತರ ಬಿಬಿಎಂಪಿ ಆಯುಕ್ತರ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ.
ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಆಗಸ್ಟ್ 11 ರಂದು ಸಂಜೆ ಸುಮಾರು 5.30ರ ಹೊತ್ತಿಗೆ ಗುಣನಿಯಂತ್ರಣ ವಿಭಾಗದ ಪ್ರಯೋಗಾಲಯ ಹಾಗೂ ಕಚೇರಿ ಕಟ್ಟಡದಲ್ಲಿ ಅಗ್ನಿ ಅವಗಢ ಸಂಭವಿಸಿತ್ತು. ಅವಘಡದಲ್ಲಿ ಕಚೇರಿಯಲ್ಲಿದ್ದ ಒಟ್ಟು 9 ಮಂದಿ ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಅವರು ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೇಲ್ನೋಟಕ್ಕೆ ಗುಣ ನಿಯಂತ್ರಣ ಪ್ರಯೋಗಾಲಯದಲ್ಲಿ ಬಿಟುಮಿನ್ ಆಕಾಗ್ರತೆ ಹಾಗೂ ಶಕ್ತಿಯ ಏಕಾಗ್ರತೆಯನ್ನು ಪರೀಕ್ಷೆ ಮಾಡುವಾಗ ರಾಸಾಯನಿಕ ಬಳಸಲಾಗುತ್ತದೆ. ಅದರಿಂದಲೇ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ತಿಳಿದು ಬಂದಿತ್ತು. ಘಟನೆ ಸಂಬಂಧ ತಡರಾತ್ರಿ ಬಿಬಿಎಂಪಿ ಅಧಿಕಾರಿಗಳು ದೂರು ನೀಡಿದ್ದು, ನಿರ್ಲಕ್ಷ್ಯತನ ಆರೋಪದಡಿ ದೂರು ದಾಖಲಾಗಿತ್ತು. ಹಲಸೂರು ಗೇಟ್ ಠಾಣೆಯಲ್ಲಿ ಇಬ್ಬರು ಅಸಿಸ್ಟೆಂಟ್ ಅಕ್ಸಿಕ್ಯೂಟಿವ್ ಇಂಜಿನಿಯರ್ಗಳು ಹಾಗೂ ಒಬ್ಬರು ಡಿ ಗ್ರೂಪ್ ನೌಕರನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಬ್ಬರು ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದ ಹಲಸೂರು ಗೇಟ್ ಠಾಣಾ ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು.
ಈ ಬಗ್ಗೆ ಸಂಪೂರ್ಣ ತನಿಖೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಆದೇಶ ನೀಡಿದ್ದರು. ಈ ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಕಿ ಅವಘಡ ಪ್ರಕರಣ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಲಾಗುತ್ತಿದೆ. ವರದಿ ಬಂದ ನಂತರ ವರದಿಯನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು. ಈ ಕುರಿತು ಬಿಬಿಎಂಪಿ ಹಿರಿಯ ಅಧಿಕಾರಿಗಳಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ಎಲ್ಲಾ ವರದಿಗಳು ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಇದನ್ನೂ ಓದಿ :ಬಿಬಿಎಂಪಿ ಅಗ್ನಿ ಅವಘಡ ಪ್ರಕರಣ: ಮೂವರ ವಿಚಾರಣೆ