ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಚೇರಿ ಆವರಣದ ಗುಣ ನಿಯಂತ್ರಣ ಪ್ರಯೋಗಾಲಯದ ಕಚೇರಿಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುಖ್ಯ ಅಭಿಯಂತರ ಶಿವಕುಮಾರ್ ಇಂದು (ಬುಧವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಗುರುವಾರ ಕುಟುಂಬಸ್ಥರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ.
ಶೇಷಾದ್ರಿಪುರ ಅಪೋಲೊ ಆಸ್ಪತ್ರೆ ಮುಖ್ಯಸ್ಥ ಡಾ.ಉದಯ್ ಮಾತನಾಡಿ, "ಬಿಬಿಎಂಪಿ ಎಂಜಿನಿಯರ್ ಶಿವಕುಮಾರ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟರು. ವಾರದ ಹಿಂದೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ 7 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ದೇಹದ ಉಸಿರಾಟ ನಡೆಸುವ ಭಾಗಗಳಿಗೆ ಸಾಕಷ್ಟು ಹಾನಿಯಾಗಿತ್ತು. ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಆದರೆ, ಪ್ರಯತ್ನ ಫಲ ನೀಡಲಿಲ್ಲ" ಎಂದರು.
"ಶಿವಕುಮಾರ್ ಅವರ ಮೃತ ದೇಹವನ್ನು ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಈಗಾಗಲೇ ಕೊಂಡೊಯ್ಯಲಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಮೃತ ದೇಹದ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಅವರ ಹುಟ್ಟೂರಾದ ನಂಜನಗೂಡಿನ ಚಂದ್ರವಾಡಿ ಗ್ರಾಮದಲ್ಲಿ ಗುರುವಾರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿವೆ" ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಸೇರಿ ಇತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ್ದಾರೆ. "ಪಾಲಿಕೆಯ ಹಲವು ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಶಿವಕುಮಾರ್ ಕಿರಿಯ ವಯಸ್ಸಿನಲ್ಲೇ ವಿಧಿವಶರಾಗಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ಕುಟುಂಬ ಸದಸ್ಯರು ಹಾಗೂ ಬಂಧು-ಮಿತ್ರರಿಗೆ ಕರುಣಿಸಲಿ" ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.