ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಅವಹೇಳಕಾರಿ ಪೋಸ್ಟ್ ಹಾಗೂ ವಿಡಿಯೊ ಬಿತ್ತರಿಸುವ ಮೂಲಕ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ತೇಜೋವಧೆ ಮಾಡಿರುವುದಾಗಿ ಆರೋಪಿಸಿ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಪಿಸಿಸಿ ಸಂವಹನ ವಿಭಾಗದ ಸಹ ಅಧ್ಯಕ್ಷ ರಮೇಶ್ ಬಾಬು ನೀಡಿದ ದೂರಿನ ಮೇರೆಗೆ ಅಮಿತ್ ಮಾಳವಿಯ ವಿರುದ್ಧ ಐಪಿಸಿ 153 ಬಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ, 120ಬಿ ಒಳಸಂಚು, 505 ಬೆದರಿಕೆಯಡಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಕೇಸ್ ಕೊಡಲಾಗಿದೆ. ’’ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲಾ ದೇಶದ ಬಗ್ಗೆ ಕಳಮಟ್ಟದಲ್ಲಿ ಮಾತನಾಡುತ್ತಾರೆ ಎಂಬ ವಿಚಾರವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೇ ಆಂತಕವಾದಿಗಳಿಗಿಂತಲೂ ರಾಹುಲ್ ಗಾಂಧಿ ಅಪಾಯಕಾರಿ ಎಂದು ಅಣಕಿಲಾಗಿದೆ. ಇದು ವಿವಿಧ ವರ್ಗಗಳ ಕೋಮುಭಾವನೆಗೆ ಧಕ್ಕೆ ಹಾಗೂ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವ ರೀತಿಯಲ್ಲಿ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯ ಪೋಸ್ಟ್ ಮಾಡಿರುವುದು ಖಂಡನಾರ್ಹ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು‘‘ ಎಂದು ರಮೇಶ್ ಬಾಬು ದೂರು ನೀಡಿದ ಮೇರೆಗೆ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, "ಬಿಜೆಪಿ ಕಾನೂನು ಸರಿಯಾಗಿ ಪಾಲನೆ ಆದಾಗಲೆಲ್ಲ ಅಳುತ್ತದೆ. ಅವರಿಗೆ ಈ ನೆಲದ ಕಾನೂನಿನ ಬಗ್ಗೆ ಮತ್ತು ಸಂವಿಧಾನದ ಬಗ್ಗೆ ನಂಬಿಕೆ ಇಲ್ಲ. ಮಾಳವೀಯ ಅವರ ಮೇಲೆ ದಾಖಲಾದ ಎಫ್ಐಆರ್ನಲ್ಲಿ ಯಾವುದನ್ನು ಬದಲಾಯಿಸಲಾಗಿದೆ ಎಂಬುದನ್ನು ಬಿಜೆಪಿಯವರು ಹೇಳಲಿ. ಅವಹೇಳನಕಾರಿ ವಿಡಿಯೋವನ್ನು ಮಾಡಿದವರು ಯಾರು, ವಿಡಿಯೋವನ್ನು ಪ್ರಚಾರ ಮಾಡಿದವರು ಯಾರು, ಯಾರು ಈ ಸುಳ್ಳುಗಳನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಡಿದವರು. ಕರ್ನಾಟಕದ ಜನತೆಗೆ ನಾನು ಹೇಳುವುದೇನೆಂದರೆ ಈ ಸುಳ್ಳು ಸುದ್ದಿಗಳೆಲ್ಲ ತೊಳೆದು ಹೋಗಲಿದೆ. ನಾವು ಈ ಪ್ರಕರಣವನ್ನು ಕಾನೂನಾತ್ಮಕ ಸಲಹೆಯಿಂದಲೇ ದಾಖಲಿಸಿದ್ದೇವೆ. ನಾವು ಈ ಪ್ರಕರಣ ದಾಖಲು ಮಾಡಲು ವಾರಗಳನ್ನು ತೆಗೆದುಕೊಂಡು, ಸಲಹೆ ಪಡೆದ ನಂತರವೇ ಈ ಕೆಲಸ ಮಾಡಿದ್ದೇವೆ. ದಾಖಲಾದ ಸೆಕ್ಷನ್ ಯಾವುದರಲ್ಲಿ ಉದ್ದೇಶ ಪೂರಿತವಾಗಿ ಕಾಣುತ್ತಿದೆ ಎಂಬುದನ್ನು ಜನರೇ ಹೇಳಲಿ" ಎಂದಿದ್ದಾರೆ.