ಬೆಂಗಳೂರು :ವಂಚನೆಯ ಕುರಿತು ದೂರು ದಾಖಲಿಸಿದ್ದಕ್ಕೆ ಬಿಲ್ಡರ್ ಅನ್ನು ಅಪಹರಿಸಿ ಕಿರುಕುಳ ನೀಡಿದ್ದ ಆರೋಪಿಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಿಲ್ಡರ್ ಅಶೋಕ್ ಶಿವರಾಜ್ ಎಂಬುವರನ್ನು ಜನವರಿ 12 ರಂದು ಜ್ಞಾನಭಾರತಿ ಸಮುದಾಯ ಭವನದ ಬಳಿಯಿಂದ ಅಪಹರಿಸಿದ್ದರು. ಈ ಸಂಬಂಧ ವೀರೇಶ್, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ರಘು ಸೇರಿ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹಲವು ವರ್ಷಗಳಿಂದ ಬಿಲ್ಡರ್ ಆಗಿ ಗುರುತಿಸಿಕೊಂಡಿದ್ದ ಅಶೋಕ್ ಶಿವರಾಜ್ಗೆ ಇದ್ದಕ್ಕಿದ್ದಂತೆ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು. ಈ ವೇಳೆ ವೀರೇಶ್ ಮತ್ತು ರಶ್ಮಿ ಅವರ ಪರಿಚಯವಾಗಿ ವ್ಯವಹಾರದಲ್ಲಿ ಪಾಲುದಾರರಾಗಿದ್ದರು. ಆದರೆ ನಂತರದಲ್ಲಿ ಅಶೋಕ್ ಅವರ ಆಸ್ತಿ ಕಬಳಿಸಲು ಸಂಚು ಆರೋಪಿಗಳು ರೂಪಿಸಿದ್ದರು. ಆಶೋಕ್ ಅವರನ್ನು ಕಳೆದ 1 ವರ್ಷದಿಂದ ಬಂಧನದಲ್ಲಿರಿಸಿ ಫ್ಲ್ಯಾಟ್ ಸೇರಿದಂತೆ ಅಕ್ರಮವಾಗಿ ಜಮೀನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.