ಬೆಂಗಳೂರು: ಕಳೆದು ಹೋದ ಪಾಸ್‌ಪೋರ್ಟ್ ಅನ್ನು ಮತ್ತೆ ಪಡೆಯಲು ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಥಮ ವರ್ತಮಾನ ವರದಿಯ (ಎಫ್‌ಐಆರ್) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ. ಪಾಸ್‌ಪೋರ್ಟ್ ಮರು ವಿತರಿಸಲು ಪ್ರಾದೇಶಿಕ ಪಾಸ್‌ಪೋರ್ಟ್ ಅಧಿಕಾರಿಗೆ (ಆರ್‌ಪಿಒ) ಸೂಚನೆ ನೀಡಲು ಕೋರಿ ಬೆಂಗಳೂರಿನ ಇಟ್ಟಮಡು ನಿವಾಸಿ ಶ್ರೀಧರ ಕುಲಕರ್ಣಿ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಹೊರಡಿಸಿತು.
ಅರ್ಜಿದಾರರ ಪ್ರಕರಣವು ಹೊಸ ಪಾಸ್‌ಪೋರ್ಟ್ ವಿತರಣೆಗೆ ಸಂಬಂಧಿಸಿದ್ದಲ್ಲ. ಈಗಾಗಲೇ ವಿತರಿಸಲಾಗಿದ್ದ ಪಾಸ್‌ಪೋರ್ಟ್ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಮರು ವಿತರಣೆಗೆ ಕೋರಿರುವ ಪ್ರಕರಣವಾಗಿದೆ. ಪಾಸ್‌ಪೋರ್ಟ್ ಅಧಿನಿಯಮ -1980ರಲ್ಲಿ ಕಳೆದು ಹೋದ ಪಾಸ್‌ಪೋರ್ಟ್ ಮರು ವಿತರಣೆಗೆ ಕೋರಿ ಸಲ್ಲಿಸುವ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳ ನಮೂನೆಯ ಕುರಿತು ಹೇಳಲಾಗಿದ್ದು, ಎಫ್‌ಐಆರ್ ಪ್ರತಿಯೂ ಆ ದಾಖಲೆಗಳಲ್ಲೊಂದು. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಪಾಸ್‌ಪೋರ್ಟ್ ಮರುವಿತರಣೆಗೆ ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿಲ್ಲ ಎಂದು ತಿಳಿಸಿ ಮನವಿ ತಿರಸ್ಕರಿಸಿದೆ.
ವಿದೇಶ ಪ್ರಯಾಣ ಮೂಲಭೂತ ಹಕ್ಕು. ಆದರೆ, ಅದನ್ನು ಪಾಸ್‌ಪೋರ್ಟ್ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಅಧಿನಿಯಮಗಳಿಂದ ನಿಯಂತ್ರಿಸಲಾಗುತ್ತದೆ. ನಿಯಮಗಳು ನಿರ್ದಿಷ್ಟ ಕಾರ್ಯ ವಿಧಾನವನ್ನು ರೂಪಿಸಿರುವಾಗ, ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಪ್ರತಿಯೊಬ್ಬರೂ ಅದನ್ನು ಪಾಲಿಸಬೇಕು. ಅರ್ಜಿದಾರರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಆರ್‌ಪಿಒ ಅದನ್ನು ಕಾನೂನು ಪ್ರಕಾರ ಪರಿಗಣಿಸಿ ಆದಷ್ಟು ಶೀಘ್ರ ತೀರ್ಮಾನಿಸಬೇಕು ಎಂದು ತಿಳಿಸಿದ ಪೀಠ ಅರ್ಜಿ ಇತ್ಯರ್ಥಪಡಿಸಿತು.