ಕರ್ನಾಟಕ

karnataka

ETV Bharat / state

ವಾಟಾಳ್ ನಾಗರಾಜ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು - ತಮಿಳು ಚಿತ್ರ ಬಿಡುಗಡೆಗೆ ವಾಟಾಳ್ ನಾಗರಾಜ್ ಅಡ್ಡಿ

ಕನ್ನಡಕ್ಕೆ ಡಬ್ ಆದ ತಮಿಳು ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದ ಆರೋಪದ ಮೇಲೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೇಲೆ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಾಟಾಳ್ ನಾಗರಾಜ್

By

Published : Nov 9, 2019, 11:04 PM IST

ಬೆಂಗಳೂರು:ತಮಿಳು ಚಿತ್ರವೊಂದನ್ನ ಕನ್ನಡದಲ್ಲಿ ಡಬ್​ ಮಾಡಿ ಬಿಡುಗಡೆಗೊಳಿಸದಂತೆ ಆಗ್ರಹಿಸಿ, ನಿರ್ಮಾಪಕರ ಕಚೇರಿಗೆ ನುಗ್ಗಿ ಪಿಠೋಪಕರಣಗಳನ್ನ ಧ್ವಂಸಗೊಳಿಸಿದ ಆರೋಪದಡಿ ನ್ಯಾಯಾಲಯ ಆದೇಶ ಮೇರೆಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ವಿಧಾನಸೌಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

2017ರ ಮಾ. 3ರಂದು ನಿರ್ಮಾಪಕ ಹಾಗೂ ವಿತರಕ ಕೃಷ್ಣಮೂರ್ತಿ ಎಂಬುವರ ಕಚೇರಿಗೆ ವಾಟಾಳ್ ನಾಗರಾಜ್ ಹಾಗೂ ಅವರ ಬೆಂಬಲಿಗರು ಹೋಗಿ ಕಚೇರಿಯಲ್ಲಿದ್ದ ಪೀಠೋಪಕರಣ ಹಾನಿಗೊಳಿಸಿ ಧಮ್ಕಿ ಹಾಕಿದ್ದರು. ಈ ಘಟನೆ ನಡೆಯುವ ಮೂರು ದಿನ ಮುಂಚೆ ರಾಜ್ಯದಲ್ಲಿ ತಮಿಳು ಚಿತ್ರವನ್ನ ಕನ್ನಡದಲ್ಲಿ ಡಬ್​ ಮಾಡಿ ಚಿತ್ರ ಬಿಡುಗಡೆ ಮಾಡಿದರೆ ಚಿತ್ರಮಂದಿರಗಳಿಗೆ ಬೆಂಕಿ ಹಾಕುವುದಾಗಿ ಪ್ರೆಸ್ ಕ್ಲಬ್​ನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದರು. ಈ ಸಂಬಂಧ ಕೃಷ್ಣಮೂರ್ತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಾದ-ಪ್ರತಿವಾದದ ಬಳಿಕ 5ನೇ ಎಸಿಎಂಎಂ ನ್ಯಾಯಾಲಯ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಘಟನೆ ನಡೆದ ಸ್ಥಳದ ಆಧಾರದ ಮೇಲೆ ವಿಧಾನಸೌಧ ಪೊಲೀಸರಿಗೆ ಉಪ್ಪಾರಪೇಟೆ ಪೊಲೀಸರು ಇತ್ತೀಚೆಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ. 2016ರಲ್ಲಿ ಎನೈ ಆರಿಂಧಾಳ್ ಎಂಬ ಹೆಸರಿನ ತಮಿಳು ಚಲನಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಲು ಕೇಂದ್ರೀಯ ಚಲನಚಿತ್ರ ಮಂಡಳಿಯಿಂದ ಅನುಮತಿ ಪಡೆದುಕೊಂಡು ಕನ್ನಡದಲ್ಲಿ ಸತ್ಯದೇವ್ ಐಪಿಎಸ್ ಎಂಬ ಹೆಸರಿನಲ್ಲಿ ಡಬ್ ಮಾಡಿ ಬಿಡುಗಡೆಗೊಳಿಸಲು ಕೃಷ್ಣಮೂರ್ತಿ ಅವರು ತಯಾರಿ ನಡೆಸುತ್ತಿದ್ದರು.

ಚಿತ್ರ ಬಿಡುಗಡೆ ಆಗುವುದನ್ನ ಅರಿತ ವಾಟಾಳ್ ನಾಗರಾಜ್, ಸಿನಿಮಾ ಬಿಡುಗಡೆ ಮಾಡಿದರೆ ಚಿತ್ರಮಂದಿರಕ್ಕೆ ಬೆಂಕಿ ಇಡುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ಬೆದರಿಸಿದ್ದಾರೆ. ನಂತರ ನನ್ನ ಕಚೇರಿಗೆ ಬಂದ ವಾಟಾಳ್ ನಾಗರಾಜ್​ ಹಾಗೂ ಅವರ ಬೆಂಬಲಿಗರು ಪೀಠೋಪಕರಣಗಳನ್ನ ಹಾನಿ ಮಾಡಿ ಚಿತ್ರ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಿದ್ದರು. ಸತ್ಯದೇವ್ ಐಪಿಎಸ್ ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ್ದರಿಂದ 10 ಲಕ್ಷ ರೂ. ನಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details