ಬೆಂಗಳೂರು:ಶೇಷಾದ್ರಿಪುರಂನಲ್ಲಿರುವ ರಾಜ್ಯ ಜೆಡಿಎಸ್ ಕಚೇರಿ ಕಾಂಪೌಂಡ್ ಗೋಡೆಗಳ ಮೇಲೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು 'ವಿದ್ಯುತ್ ಕಳ್ಳ' ಎಂದು ಬರೆದು ಪೋಸ್ಟರ್ ಅಂಟಿಸಿದ್ದ ಕಿಡಿಗೇಡಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪೋಸ್ಟರ್ ಅಂಟಿಸಿದ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸುವ ಹಾಗೂ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದಡಿ ಬಿಂದು ಹಾಗೂ ನವೀನ್ ಗೌಡ ಎಂಬವರ ವಿರುದ್ಧ ಎಚ್.ಎಂ.ರಮೇಶ್ ಗೌಡ ಎಂಬವರು ನೀಡಿದ ದೂರಿನ ಮೇರೆಗೆ ಶೇಷಾದ್ರಿಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನವೆಂಬರ್ 14ರ ರಾತ್ರಿ ಜೆಡಿಎಸ್ ಪ್ರಧಾನ ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ನಾಲ್ವರು ಅತಿಕ್ರಮ ಪ್ರವೇಶಿಸಿ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ್ದರು. ಈ ಬಗ್ಗೆ ಪ್ರಶ್ನಿಸಲು ಮುಂದಾದ ಕಚೇರಿಯ ಭದ್ರತಾ ಸಿಬ್ಬಂದಿ ಮಹಾದೇವ ಅವರನ್ನು ಬೆದರಿಸಿದ್ದರು. ಅವಾಚ್ಯ ಶಬ್ಧಗಳಿಂದ ನಿಂದಿಸಿ ನಾಳೆಯಿಂದ ಇಲ್ಲಿ ಕೆಲಸ ಮಾಡಕೂಡದು ಎಂದು ತಾಕೀತು ಮಾಡಿದ್ದಾರೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿರುವ ಕಿಡಿಗೇಡಿಗಳು, 200 ಯುನಿಟ್ ಉಚಿತ ವಿದ್ಯುತ್, ನೆನಪಿಟ್ಟುಕೊಳ್ಳಿ. ಹೆಚ್ಚು ಕದಿಯಬೇಡಿ ಎಂದು ಬರೆದಿದ್ದರು. ದೀಪಾವಳಿ ಹಬ್ಬದ ಕಾರಣ ಜೆ.ಪಿ.ನಗರದಲ್ಲಿರುವ ಕುಮಾರಸ್ವಾಮಿ ಅವರ ಮನೆಗೆ ದೀಪಾಲಂಕಾರ ಮಾಡುವ ಸಂದರ್ಭದಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು. ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಅವರೇ ಅಚಾತುರ್ಯದಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡು ದಂಡ ಕಟ್ಟುವುದಾಗಿ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ವಿರುದ್ಧ ಜಯನಗರದ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಭಾರತೀಯ ವಿದ್ಯುತ್ ಕಾಯ್ದೆ 135ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ದೇಶ ಮತ್ತು ರಾಜ್ಯ ಮುಳುಗಿ ಹೋಗುವಂತಹ ಕೆಲಸ ನಾನೇನೂ ಮಾಡಿಲ್ಲ. ಸರ್ಕಾರದ ನೀತಿ ನಿಯಮಗಳ ಪ್ರಕಾರ ಏನು ದಂಡ ಕಟ್ಟಬೇಕೋ ಅದಕ್ಕೆ ನಾನು ಸಿದ್ಧನಿದ್ದೇನೆ ಎಂದಿದ್ದಾರೆ.
ಕುಮಾರಸ್ವಾಮಿ ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಅಂತ ದರಿದ್ರ ನನಗೆ ಬಂದಿಲ್ಲ. ಅಂತ ದರಿದ್ರ ಬಂದಿರೋದು ಕಾಂಗ್ರೆಸ್ ನಾಯಕರಿಗೆ. ನಾನು ಹರಿಶ್ಚಂದ್ರ ಅಂತ ಹೇಳ್ತಿಲ್ಲ. ಕಾಂಗ್ರೆಸ್ ನಾಯಕರು ಮಾಡುತ್ತಿರೋ ದಂಧೆಗೆ ನಾನು ಯಾವತ್ತೂ ಅವಕಾಶ ಕೊಟ್ಟಿಲ್ಲ ಎಂದು ತಿರುಗೇಟು ನೀಡಿದ್ದರು.
ಇದನ್ನೂ ಓದಿ:ಜೆಡಿಎಸ್ ಕಚೇರಿ ಕಾಂಪೌಂಡ್ ಮೇಲೆ ಪೋಸ್ಟರ್ ಅಂಟಿಸಿದ ಕಿಡಿಗೇಡಿಗಳು; ಪೊಲೀಸರಿಂದ ತೆರವು- ವಿಡಿಯೋ