ಬೆಂಗಳೂರು: ವಿಧಾನಸಭಾ ಚುನಾವಣೆ ಖರ್ಚಿಗಾಗಿ ಕೋಟ್ಯಂತರ ರೂಪಾಯಿ ಸಾಲ ಪಡೆದು ಹಣ ನೀಡದೆ ಸತಾಯಿಸುತ್ತಿದ್ದಾರೆಂದು ಆರೋಪಿಸಿ, ಮಾಜಿ ಶಾಸಕ ಮತ್ತು ಪತ್ನಿ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
3 ಕೋಟಿ ಸಾಲ ಪಡೆದು ವಾಪಸ್ ನೀಡದ ಆರೋಪ: ಮಾಜಿ ಶಾಸಕನ ವಿರುದ್ಧ ಎಫ್ಐಆರ್ ದಾಖಲು - former MLA Narasimhaswamy
2018 ರಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿಯಾಗಿದ್ದ ನರಸಿಂಹಸ್ವಾಮಿಯವರು ಚುನಾವಣಾ ಖರ್ಚಿಗಾಗಿ ಪತ್ರಕರ್ತರೊಬ್ಬರಿಂದ 3 ಕೋಟಿ ರೂ ಸಾಲ ಪಡೆದು ವಾಪಸ್ ನೀಡದ ಆರೋಪದ ಹಿನ್ನೆಲೆಯಲ್ಲಿ ಸಂಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಾಲರ್ಸ್ ಕಾಲೋನಿ ನಿವಾಸಿ, ಪತ್ರಕರ್ತ ಹೆಚ್.ಸಂಗಮ್ ದೇವ್ ಎಂಬುವರು ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಮಾಜಿ ಶಾಸಕ ನರಸಿಂಹಸ್ವಾಮಿ ಹಾಗೂ ಅವರ ಪತ್ನಿ ನಾಗಮಣಿ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮಾಜಿ ಶಾಸಕರ ಆಪ್ತರಾಗಿ ಸಂಗಮ್ ದೇವ್ ಗುರುತಿಸಿಕೊಂಡಿದ್ದರು. 2018 ರಲ್ಲಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಆಭ್ಯರ್ಥಿಯಾಗಿದ್ದ ನರಸಿಂಹಸ್ವಾಮಿ ಚುನಾವಣಾ ಖರ್ಚಿಗಾಗಿ ಸಂಗಮೇಶ್ ಮನೆಗೆ ಬಂದು 3 ಕೋಟಿ ರೂಪಾಯಿ ಸಾಲ ನೀಡುವಂತೆ ಕೇಳಿಕೊಂಡಿದ್ದರು. ಸಂಗಮ್ ದೇವ್ ಸಹ ಸಂಬಂಧಿಕರು ಹಾಗೂ ಸ್ನೇಹಿತರಿಂದ ಹಣ ಸಂಗ್ರಹಿಸಿ ಸಾಲ ನೀಡಿದ್ದರು. ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ 85 ಲಕ್ಷ ಮಾತ್ರ ಸಾಲ ವಾಪಸ್ ನೀಡಿದ್ದಾರೆ. ಬಾಕಿ ಉಳಿದಿರುವ ಹಣ ಕೇಳಲು ಮನೆ ಬಳಿಗೆ ಹೋದರೆ ಹಣ ಕೊಡದೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಸಂಗಮ್ ದೇವ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.