ಬೆಂಗಳೂರು:ಕ್ರಿಸ್ಮಸ್ ಟ್ರೀ ಪ್ರದರ್ಶನ ಹಾಗೂ ಟಿಕೆಟ್ ನಿಗದಿಪಡಿಸಿರುವುದನ್ನು ವಿರೋಧಿಸಿ ಮಾಲ್ ಸಿಬ್ಬಂದಿಗೆ ತೊಂದರೆ ಹಾಗೂ ಬೆದರಿಕೆ ಹಾಕಿರುವ ಆರೋಪದ ಮೇಲೆ ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮತ್ತು ಅವರ ನಾಲ್ವರು ಬೆಂಬಲಿಗರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾದ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ನೀಡಿರುವ ದೂರಿನ ಅನ್ವಯ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 23 ರಂದು ಮಧ್ಯಾಹ್ನ ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾ ಬಳಿ ತೆರಳಿದ್ದ ಪುನೀತ್ ಕೆರೆಹಳ್ಳಿ ಮತ್ತವರ ಬೆಂಬಲಿಗರು, ಮಾಲ್ ಒಳಗೆ ಕ್ರಿಸ್ಮಸ್ ಟ್ರೀ ಪ್ರದರ್ಶನ ಹಾಗೂ ಅದಕ್ಕೆ 200 ರೂ. ಟಿಕೆಟ್ ನಿಗದಿಪಡಿಸಿರುವುದನ್ನು ವಿರೋಧಿಸಿದ್ದಾರೆ. ಈ ವೇಳೆ ಮಾಲ್‌ನ ಸೆಕ್ಯೂರಿಟಿ ಅಸಿಸ್ಟೆಂಟ್ ಮ್ಯಾನೇಜರ್ ಸ್ಟೀಫನ್ ವಿಕ್ಟರ್ ಬಳಿ ವಾಗ್ವಾದ ನಡೆಸಿದ್ದಾರೆ ಎಂದು ದೂರಲಾಗಿದೆ. ಅಲ್ಲದೇ ಡಿಸೆಂಬರ್ 25 ಹಾಗೂ 31ರಂದು ಅದೇ ರೀತಿ ಗಲಾಟೆ ಮಾಡುವುದಾಗಿ ತಿಳಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.