ಬೆಂಗಳೂರು :ಸರ್ಕಾರ ಮಹಿಷಾ ದಸರಾಗೆ ಸಮ್ಮತಿ ಸೂಚಿಸಿದ್ದನ್ನು ವಿರೋಧಿಸುವ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋಟೋ ತಿರುಚಿ ಫೇಸ್ಬುಕ್ನಲ್ಲಿ ಪ್ರಕಟಿಸಿದ್ದ ವ್ಯಕ್ತಿಯ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಯ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ವಕ್ತಾರ ಹಾಗೂ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ನೀಡಿರುವ ದೂರಿನ ಅನ್ವಯ ತುಮಕೂರಿನ ಗುಬ್ಬಿ ಮೂಲದ ಶ್ರೀನಿವಾಸ್ ಎಂಬಾತನ ವಿರುದ್ಧ ಹೈಗ್ರೌಂಡ್ಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಫೇಸ್‍ಬುಕ್ ಖಾತೆಯಲ್ಲಿ ಫೋಟೊವೊಂದಕ್ಕೆ ಸಿಎಂ ಸಿದ್ದರಾಮಯ್ಯ ಮುಖ ಬಳಸಿ ಎಡಿಟ್ ಮಾಡಿದ್ದಲ್ಲದೇ, ಅವಾಚ್ಯ ಪದಗಳಿಂದ ನಿಂದಿಸಿ ಅಪ್ಲೋಡ್ ಮಾಡಲಾಗಿದೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರು ನೀಡಲಾಗಿತ್ತು. ಅದರ ಅನ್ವಯ ಆರೋಪಿತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ಒಕ್ಕಲಿಗರ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ.. ಪ್ರೊ. ಕೆ ಎಸ್ ಭಗವಾನ್ ವಿರುದ್ಧ ಎಫ್ಐಆರ್
ಪ್ರತ್ಯೇಕ ಪ್ರಕರಣ, ಬೆಂಗಳೂರಲ್ಲಿ ಐವರು ಬೈಕ್ ಕಳ್ಳರ ಬಂಧನ :ದ್ವಿಚಕ್ರ ವಾಹನಗಳ ಕಳ್ಳತನ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಇಬ್ಬರು, ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಮುಬಾರಕ್ ಎಂಬಾತ ಹಾಗೂ ರಾಮಮೂರ್ತಿ ನಗರ ಠಾಣಾ ಪೊಲೀಸರು ಮೊಹಮ್ಮದ್ ಸಲ್ಮಾನ್ ಹಾಗೂ ಸೈಯ್ಯದ್ ರಿಜ್ವಾನ್ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರು ಪೂರ್ವ ವಿಭಾಗದ ವಿವಿಧ ಏರಿಯಾಗಳ ನಿವಾಸಿಗಳೇ ಆಗಿರುವ ಆರೋಪಿಗಳು ಕಮರ್ಶಿಯಲ್ ಸ್ಟ್ರೀಟ್, ಹೈಗ್ರೌಂಡ್ಸ್, ಹೆಣ್ಣೂರು, ಬಾಣಸವಾಡಿ, ಕೆ ಜಿ ಹಳ್ಳಿ, ಡಿ ಜೆ ಹಳ್ಳಿ, ಗೋವಿಂದಪುರ, ಕೆ ಆರ್ ಪುರಂ, ಹೆಚ್ ಎ ಎಲ್ ಹಾಗೂ ರಾಮಮೂರ್ತಿ ನಗರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದರು. ಬಳಿಕ ಕದ್ದ ಬೈಕ್ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಮಾಹಿತಿ : ಕಳೆದ ಒಂದು ತಿಂಗಳಿನಿಂದ ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 50 ಲಕ್ಷ ರೂ. ಮೌಲ್ಯದ 60 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಿ ದೇವರಾಜ್ ತಿಳಿಸಿದ್ದಾರೆ.