ಬೆಂಗಳೂರು: ಆರ್.ಆರ್.ನಗರ ಉಪಚುನಾವಣೆ ಕಣ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಜಿದ್ದಾಜಿದ್ದು ನಡೆಯುತ್ತಿದೆ. ಇದೇ ವೇಳೆ ಮತದಾರರಿಗೆ ಹಣದ ಆಮಿಷವೊಡ್ಡಿದ ಕಾರಣಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಎಂಎಲ್ಸಿ ನಾರಾಯಣ ಸ್ವಾಮಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುನಿರತ್ನ ಅವರು ತಮಗೆ ಮತ ಹಾಕುವಂತೆ ಬಿ.ಕೆ.ನಗರದಲ್ಲಿ 5 ಸಾವಿರ ರೂ. ಹಣ ಹಂಚಿದ್ದಾರೆ ಎಂದು ಸಲೀಂ ಅಹಮ್ಮದ್ ಎಂಬವರು ದೂರು ನೀಡಿದ್ದಾರೆ. ಇದರ ಬಗ್ಗೆ ಕೆಲ ದಾಖಲಾತಿಗಳನ್ನು ಪೊಲೀಸರಿಗೆ ನೀಡಿದ್ದಾರಂತೆ. ಹೀಗಾಗಿ ಪೊಲೀಸರು 24 ನೇ ಎಸಿಎಂಎಂ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.