ಬೆಂಗಳೂರು : ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಜ್ಯುವೆಲ್ಲರಿ ಶಾಪ್ ಮಾಲೀಕನ ಮನೆಯಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಅನ್ಯ ರಾಜ್ಯಗಳಿಂದ ಅಪ್ರಾಪ್ತ ಬಾಲಕಿಯರನ್ನು ಕರೆತಂದು ಮನೆಗೆಲಸ ಮಾಡಿಸುತ್ತಿದ್ದ ಆರೋಪದಡಿ ಜ್ಯುವೆಲ್ಲರಿ ಶಾಪ್ ಮಾಲೀಕ ಅಶೋಕ್ ಕುಮಾರ್ (51), ಶ್ರೇಯಾಂಸ್ ಚೌಧರೆ (27) ಹಾಗೂ ಗೌರವ್ ಚೌಧರೆ (25) ಎಂಬುವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದಾಯ ತೆರಿಗೆ ಸೇರಿದಂತೆ ವಿವಿಧ ವಂಚನೆ ಪ್ರಕರಣಗಳ ಆರೋಪದಡಿ ನಗರಾದ್ಯಂತ ಅನೇಕ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆಗಳು, ಕಚೇರಿಗಳ ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ಜಯನಗರ ಠಾಣಾ ವ್ಯಾಪ್ತಿಯ ಯಡಿಯೂರಿನ ಪಾಪು ಕಾಟೇಜ್ ಏರಿಯಾದಲ್ಲಿರುವ ಅಶೋಕ್ ಕುಮಾರ್ ಎಂಬುವರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಅಪ್ರಾಪ್ತ ಹೆಣ್ಣುಮಕ್ಕಳಿಬ್ಬರು ಪತ್ತೆಯಾಗಿದ್ದರು. ತಕ್ಷಣ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದರು.
ಅದರನ್ವಯ ಜಯನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಸವರಾಜ್ ಪಾಟೀಲ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿ, ಆರೋಪಿತರ ಮನೆಯಲ್ಲಿ ಪರಿಶೀಲಿಸಿದಾಗ ಬಿಹಾರ ರಾಜ್ಯದ ಗಯಾ ಜಿಲ್ಲೆ ಮೂಲದ 10 ಹಾಗೂ 8 ವರ್ಷದ ಬಾಲಕಿಯರು ಪತ್ತೆಯಾಗಿದ್ದರು. ಬಾಲಕಿಯರ ಪೋಷಕರು ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದು, ಆರೋಪಿ ಅಶೋಕ್ ಕುಮಾರ್ ಹಾಗೂ ಆತನ ಮಕ್ಕಳಾದ ಶ್ರೇಯಾಂಸ್ ಚೌಧರೆ ಹಾಗೂ ಗೌರವ್ ಚೌಧರೆ ಸ್ಥಳಕ್ಕೆ ತೆರಳಿ ಮಕ್ಕಳನ್ನು ಕರೆತಂದು ಮನೆ ಕೆಲಸ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ಅಶೋಕ್ ಕುಮಾರ್ ಪತ್ನಿಯ ಆರೈಕೆ ಕೆಲಸ ಮಾಡಿಸುತ್ತಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.