ಬೆಂಗಳೂರು: ಕನ್ನಡದ ಹಿರಿಯ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಕಾರು ಚಾಲಕನ ವಿರುದ್ಧ ಪೊಲೀಸರು ಪ್ರಥಮ ವರ್ತಮಾನ ಮಾಹಿತಿ (ಎಫ್ಐಆರ್) ದಾಖಲಿಸಿದ್ದಾರೆ.
ಚಾಲಕ ಅಕ್ಷಯ್ ವಿರುದ್ಧ ಅಜಾಗರೂಕ ಚಾಲನೆಯ ಹಿನ್ನೆಲೆಯಲ್ಲಿ ಬನಶಂಕರಿ ಸಂಚಾರಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಕ್ಟೋಬರ್ 29 ರಂದು ತಾರಾ ಅವರು ಬೆಂಗಳೂರಿನ ಕತ್ರಿಗುಪ್ಪೆ ಬಳಿ ಕಾರಿನಲ್ಲಿ ತೆರಳುತ್ತಿದ್ದರು. ಅಕ್ಷಯ್ ಕಾರು ಓಡಿಸುತ್ತಿದ್ದರು. ಮುಂಭಾಗ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಗುದ್ದಿದ್ದಾರೆ. ಪರಿಣಾಮ ಎದುರಿನ ಕಾರು ಜಖಂಗೊಂಡಿದೆ. ಈ ಅಪಘಾತದಲ್ಲಿ ಅಕ್ಷಯ್ ಅವರದ್ದೇ ತಪ್ಪು ಎನ್ನಲಾಗಿದೆ.
ಅಕ್ಷಯ್ ಅವರ ಅಜಾಗರೂಕ ಚಾಲನೆಯಿಂದ ಈ ರೀತಿ ಆಗಿದೆ ಎಂದು ಎದುರಿನ ಕಾರಿನಲ್ಲಿದ್ದ ಮೈಸೂರು ಮೂಲದ ಗಿರೀಶ್ ಆರೋಪಿಸಿದ್ದರು. ನಂತರ ಕಾರು ಸರಿ ಮಾಡಿಸುತ್ತೇನೆಂದು ಅಕ್ಷಯ್ ಹೇಳಿದ್ದರಂತೆ. ಬಳಿಕ ನಿರ್ಲಕ್ಷ್ಯ ತೋರಿದ್ದಾರೆಂದು ಆರೋಪಿಸಿ ಬನಶಂಕರಿ ಸಂಚಾರಿ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 279 ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ದೇಶ ವಿರೋಧಿ ಚಟುವಟಿಕೆ ಯಾರು ಮಾಡುತ್ತಾರೋ ಅವರ ವಿರುದ್ಧ ಕ್ರಮ : ಬಿಜೆಪಿ ನಾಯಕಿ ತಾರಾ
ತಮ್ಮ ಕಾರನ್ನು ಮಾತ್ರ ಬನಶಂಕರಿ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಂದು ಗಿರೀಶ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ತಾರಾ ಅವರು ಅಪಘಾತ ಸಂಭವಿಸಿದ ದಿನ ಇನ್ಶೂರೆನ್ಸ್ ಲ್ಯಾಪ್ಸ್ ಆದ ಕಾರಿನಲ್ಲಿ ಚಲಿಸುತ್ತಿದ್ದರು. ಜಖಂ ಮಾಡಿರುವ ಕಾರು ತಾರಾ ಪತಿ ವೇಣುಗೋಪಾಲ್ ಹೆಚ್ ಸಿ ಹೆಸರಿನಲ್ಲಿದೆ. 2021 ರ ಅಕ್ಟೋಬರ್ನಲ್ಲಿಯೇ ತಾರಾ ಚಲಿಸುತ್ತಿದ್ದ ಕಾರಿನ ಇನ್ಶೂರೆನ್ಸ್ ಲ್ಯಾಪ್ಸ್ ಆಗಿದೆ. ಹಾಗಿದ್ದೂ ಒಂದು ವಾರಗಳ ಕಾಲ ನನ್ನನ್ನು ಅಲೆದಾಡಿಸಿದ್ದಾರೆ. ಬಳಿಕ ರಿಪೇರಿ ಮಾಡಿಸಿಕೊಡುತ್ತೇವೆಂದು ಸತಾಯಿಸಿ ಕಾಲಹರಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ರೀತಿ ಸೂಕ್ತ ಕ್ರಮ ಜರುಗಿಸುವಂತೆ ಗಿರೀಶ್ ದೂರಿನಲ್ಲಿ ಒತ್ತಾಯಿಸಿದ್ದಾರೆ.