ಬೆಂಗಳೂರು :ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ದಂಡ ವಸೂಲಿ ಮಾಡಲು ಸವಾರರ ಮನೆಗೆ ನೋಟಿಸ್, ಆನ್‌ಲೈನ್ ವ್ಯವಸ್ಥೆ ಕಲ್ಪಿಸಿದ್ದ ಸಂಚಾರಿ ಪೊಲೀಸ್ ಇಲಾಖೆಯು ಇದೀಗ ತನ್ನ ವರಸೆ ಬದಲಿಸಿದೆ. ಇನ್ನು ಮುಂದೆ ಆರ್ಟಿಒ ಕಚೇರಿಗಳಲ್ಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಿ ದಂಡ ವಸೂಲಿ ಮಾಡಲು ಮುಂದಾಗಿದೆ.
ಟ್ರಾಫಿಕ್ ಪೊಲೀಸರು ರಸ್ತೆಯಲ್ಲಿ ವಾಹನ ಸವಾರರನ್ನು ತಡೆದು ಭೌತಿಕವಾಗಿ ದಂಡ ವಸೂಲಿ ಮಾಡುವುದರಿಂದ ಸಂಚಾರ ಸಮಸ್ಯೆ ಬಿಗಡಾಯಿಸತೊಡಗಿದೆ. ಸಾರ್ವಜನಿಕರಿಂದ ಪದೇಪದೆ ದೂರುಗಳು ಕೇಳಿ ಬರುತ್ತಲಿವೆ. ಹೀಗಾಗಿ, ಸವಾರರಿಗೆ ಆನ್‌ಲೈನ್ ಮುಖಾಂತರ ದಂಡ ಕಟ್ಟಲು ಅನುವು ಮಾಡಿ ಕೊಡುವ ವ್ಯವಸ್ಥೆ ಜಾರಿಯಾಗಿತ್ತು.
ಹೀಗಿದ್ದರೂ, ನಿರೀಕ್ಷಿಸಿದಂತೆ ಸ್ವಯಂಪ್ರೇರಿತವಾಗಿ ವಿರಳ ಸಂಖ್ಯೆಯ ಸವಾರರು ಮಾತ್ರ ಪೈನ್ ಕಟ್ಟಿದ್ದರು. ದಂಡ ಕಟ್ಟಡೆ ನಿರ್ಲಕ್ಷ್ಯವಹಿಸಿ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ ಸವಾರರಂತೂ ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದ್ದರು.
ಸಂಚಾರಿ ನಿಯಮ ಪಾಲನೆ ಹಾಗೂ ಇಂತಹ ಪ್ರಕರಣಗಳನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಸಂಚಾರಿ ಪೊಲೀಸರು ಬೆಂಗಳೂರಿನಲ್ಲಿ ನಗರ ವ್ಯಾಪ್ತಿಗೆ ಬರುವ 10 ಆರ್ಟಿಒ ಕಚೇರಿಗಳಲ್ಲಿ ಪಿಎಸ್ಐ ಅಥವಾ ಎಎಸ್ಐರನ್ನು ನಿಯೋಜಿಸಿ ದಂಡ ಪಾವತಿಸಿಕೊಳ್ಳುವಂತೆ ಟ್ರಾಫಿಕ್ ಪೊಲೀಸ್ ಕಮಿಷನರ್ ಡಾ. ಬಿ. ಆರ್ ರವಿಕಾಂತೇಗೌಡ ಆದೇಶಿಸಿದ್ದಾರೆ.