ಬೆಂಗಳೂರು: ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮುಂದಿದೆ. ಈ ಮೂಲಕ ಪ್ರಥಮ ಸ್ಥಾನದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ಇದಕ್ಕೆ ಕೇಂದ್ರ ಹಾಗೂ ನಬಾರ್ಡ್ ಸಹ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಏರ್ಪಡಿಸಲಾಗಿದ್ದ ಆರ್ಥಿಕ ಸ್ಪಂದನ ಹಾಗೂ ಡಿಸಿಸಿ ಬ್ಯಾಂಕುಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರೂ. ನಂತೆ ಸಾಲ ನೀಡಿಕೆಗೆ ಅವಕಾಶವಿದ್ದು, ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ, 949 ಪ್ಯಾಕ್ಸ್ ಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್ ಗೆ 198.96 ಕೋಟಿ ರೂ ಮಂಜೂರಾಗಿದೆ. ಹೀಗಾಗಿ ಇದರ ಅನುಷ್ಠಾನಕ್ಕಾಗಿ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮುಖಾಂತರ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ ಎಂದು ತಿಳಿಸಿದರು.
2021 ಫೆಬ್ರವರಿ 25 ರವರೆಗೆ ಒಟ್ಟು 21.64 ಲಕ್ಷ ರೈತರಿಗೆ ರೂ.14,179.22 ಕೋಟಿಗಳ ಅಲ್ಪಾವಧಿ ಕೃಷಿ ಸಾಲ ಮತ್ತು 0.36 ಲಕ್ಷ ರೈತರಿಗೆ ರೂ.800.51 ಕೋಟಿಗಳ ಮಧ್ಯಮಾವಧಿ/ದೀರ್ಘವಧಿ ಸಾಲ ವಿತರಣೆ ಮಾಡಿದ್ದು, ಒಟ್ಟು ರೂ. 14,979.73 ವಿತರಿಸಲಾಗಿದೆ ಹಾಗೂ ಶೇ.90.56 ರ ಪ್ರಗತಿ ಸಾಧಿಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಮಾಹಿತಿ ನೀಡಿದರು.
ಅಲ್ಪಾವಧಿ ಸಾಲ ಶೇ.107, ಮಧ್ಯಾವಧಿ ಸಾಲ ಶೇ. 111, ದೀರ್ಘಾವಧಿ ಸಾಲ ಶೇ.76, ಸ್ವಸಹಾಯ ಗುಂಪುಗಳ ಸಾಲ ಶೇ.71, ಕಾಯಕ ಯೊಜನೆಯಡಿ ಶೇ. 61, ಬಡವರಬಂಧು ಯೋಜನೆಯಡಿ ಶೇ. 52, ಹೈನುಗಾರಿಕೆ / ಮೀನುಗಾರಿಕೆ ಯೋಜನೆಯಡಿ ಶೇ.97, ಕೃಷಿಯೇತರ ಸಾಲದಲ್ಲಿ ಶೇ. 92, ಪಟ್ಟಣ ಬ್ಯಾಂಕ್ ಗಳಲ್ಲಿ ಶೇ. 87, ಕ್ರೆಡಿಟ್ ಸೊಸೈಟಿಯಲ್ಲಿ ಶೇ. 92 ಹಾಗೂ ವಿವಿಧೋದ್ದೇಶ ಯೋಜನೆಗಳಡಿ ಶೇ.90ರಷ್ಟು ಸಾಲ ನೀಡಲಾಗಿದ್ದು, ಒಟ್ಟಾರೆಯಾಗಿ ಶೇ. 96 ಸಾಲವಿತರಣೆಯಲ್ಲಿ ಗುರಿ ಮುಟ್ಟಲಾಗಿದೆ. ಹಾಲಿ ಗುರಿಯನ್ನು ಈ ತಿಂಗಳೊಳಗೆ ಮುಟ್ಟುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.