ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಆರ್ಥಿಕ ತಿದ್ದುಪಡಿ ವಿಧೇಯಕ 2020 ಅಂಗೀಕಾರ - Law Minister J C Madhuswamy submits session

ನಾವು ಸಂಗ್ರಹಿಸಿ ಕೊಟ್ಟ ಹಣವನ್ನು ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರ ಏನು ಮಾಡಬೇಕು. ಇದಕ್ಕೆ ಸಿಎಂ ಅವರೇ ಬಂದು ಉತ್ತರ ನೀಡಲಿ. ಗುಜರಾತ್​, ಬಿಹಾರ ಸರ್ಕಾರಕ್ಕೆ ‌ದೊರಕುತ್ತಿರುವ ಅನುದಾನ ನಮಗೇಕೆ ದೊರಕುತ್ತಿಲ್ಲ..

Financial Amendment Obedience 2020 passed in session
ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಆರ್ಥಿಕ ತಿದ್ದುಪಡಿ ವಿಧೇಯಕ 2020 ಅಂಗೀಕಾರ

By

Published : Sep 26, 2020, 5:58 PM IST

ಬೆಂಗಳೂರು :ವಿತ್ತೀಯ ಕೊರತೆ ಹೊಣೆಗಾರಿಕೆಯಡಿ ಸಾಲ ಮಾಡುವ ಪ್ರಮಾಣದ ಮಿತಿಯನ್ನು ಶೇ.3 ರಿಂದ ಶೇ.5ಕ್ಕೆ ಹೆಚ್ಚಳ ಮಾಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ತಿದ್ದುಪಡಿ ವಿಧೇಯಕ-2020, ಪ್ರತಿಪಕ್ಷ ಕಾಂಗ್ರೆಸ್ ಸಭಾತ್ಯಾಗ, ಜೆಡಿಎಸ್ ಗೈರಿನ ನಡುವೆ ಅಂಗೀಕರಿಸಲಾಯಿತು.

ವಿಧಾನ ಪರಿಷತ್‌ನಲ್ಲಿ ವಿಧೇಯಕ ಮಂಡಿಸಿ ಮಾತನಾ‌ಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಆದಾಯ ಮತ್ತು ವಿತ್ತೀಯ ಕೊರತೆ ನಡುವೆ ಹೊಂದಾಣಿಕೆ ಅಗತ್ಯವಿದೆ. ಶೆ. 3ಕ್ಕಿಂತ ಹೆಚ್ಚು ವಿತ್ತೀಯ ಕೊರತೆ ಇರಬಾರದು ಎಂದು ಕೇಂದ್ರ ತೀರ್ಮಾನಿಸಿತ್ತು. ಆದರೆ, ಕೋವಿಡ್ ಕಾರಣದಿಂದ ಈ ಬಾರಿ ಶೇ.23 ಆದಾಯ ಕಡಿತವಾಗಿದೆ. ಹಾಗಾಗಿ, ಶೇ. 3ರಿಂದ ಶೇ. 5 ರಷ್ಟು ಮಾಡಿಕೊಳ್ಳಬಹುದು. ಇದರಿಂದ ಹೆಚ್ಚುವರಿ ಸಾಲ ಮಾಡಿ ಆರ್ಥಿಕ ಕೊರತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿದೆ. ನಮಗೆ 179920 ರೂಪಾಯಿ ಆದಾಯ ಬರಬೇಕಿತ್ತು. ಆದರೆ, 114658 ರೂಪಾಯಿ ಮಾತ್ರ ಸಂಗ್ರಹವಾಗಿದೆ.

ಅಂದರೆ 65262 ಕೋಟಿ ರೂಪಾಯಿ ಆದಾಯ ಕಡಿತವಾಗಿದೆ. ವೇತನ ಪಾವತಿ, ಪಿಂಚಣಿ ಇತ್ಯಾದಿ ನಿರ್ವಹಣೆಗೆ 150240 ಕೋಟಿ ರೂಪಾಯಿ ವೆಚ್ಚ ಬರಕಿದೆ. 87650 ಕೋಟಿ ರೂಪಾಯಿ ಸ್ಕೀಂ ಗಳಿಗೆ ಇರಿಸಲಾಗಿತ್ತು. ಆದರೆ, ಈಗ ವರಮಾನ ಶೂನ್ಯವಾಗಿದ್ದು, ಹೆಚ್ಚುವರಿ ವೆಚ್ಚವಾಗಿದೆ. 11324 ಕೋಟಿ ರೂಪಾಯಿ ಜಿಎಸ್​ಟಿ ಬರಬೇಕಿದೆ. ಇದರ ಜವಾಬ್ದಾರಿ ಕೇಂದ್ರ ತೆಗೆದುಕೊಂಡಿದೆ. ಆದರೂ ವಿತ್ತೀಯ ಕೊರತೆ ಮಿತಿಯನ್ನು ಶೇ. 5ಕ್ಕೆ ಹೆಚ್ಚಿಸಿದ್ರೆ ರಾಜ್ಯಕ್ಕೆ ಕಷ್ಟವಾಗಲಿದೆ. ಇಂದು ಸಾಲ ಪಡೆಯದೇ ಸರ್ಕಾರ ನಡೆಸಲು ಸಾಧ್ಯವಿಲ್ಲದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದು ಬಿಲ್‌ನ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಸದಸ್ಯ ಸಿ ಎಂ ಇಬ್ರಾಹಿಂ ಮಾತನಾಡಿ, ರಾಜ್ಯ ಸರ್ಕಾರ ಕೇಂದ್ರದ ಮೇಲೆ‌ ಒತ್ತಡ ಹಾಕುವಲ್ಲಿ ವಿಫಲವಾಗಿದೆ. ನಾವು ಸಂಗ್ರಹಿಸಿ ಕೊಟ್ಟ ಹಣವನ್ನು ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಕೊಡದಿದ್ದರೆ ರಾಜ್ಯ ಸರ್ಕಾರ ಏನು ಮಾಡಬೇಕು. ಇದಕ್ಕೆ ಸಿಎಂ ಅವರೇ ಬಂದು ಉತ್ತರ ನೀಡಲಿ ಎಂದು ಆಗ್ರಹಿಸಿದರು. ಗುಜರಾತ್​, ಬಿಹಾರ ಸರ್ಕಾರಕ್ಕೆ ‌ದೊರಕುತ್ತಿರುವ ಅನುದಾನ ನಮಗೇಕೆ ದೊರಕುತ್ತಿಲ್ಲ ಎಂದರು.

ಕಾಂಗ್ರೆಸ್‌ನ ಪಿ ಆರ್ ರಮೇಶ್ ಮಾತನಾಡಿ, ಸಾಲದ ಮಿತಿ ಹೆಚ್ಚಳದಿಂದ ಆರ್ಥಿಕ ಶಿಸ್ತು ಹಾಳಾಗಲಿದೆ. ಒಮ್ಮೆ ಮಿತಿಯನ್ನು ಸಡಿಲಿಕೆ ಮಾಡಿದ್ರೆ ಮುಂದೆ ಅನಾಹುತವಾಗಲಿದೆ. ಶೇ.3ರ ಮಿತಿ ಇರುವುದೇ ಆರ್ಥಿಕ ಶಿಸ್ತು ಆಗಿದ್ದು, ಅದು ಮೀರದಿರಲಿ. ಇಲ್ಲವಾದ್ರೆ ನಾವೇ ಅಶಿಸ್ತಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ಮೂಲ ಉದ್ದೇಶವನ್ನೂ ಉಲ್ಲಂಘನೆ ಮಾಡುತ್ತಿದ್ದೇವೆ ಇದಕ್ಕೆ ಅವಕಾಶ ಕೊಡಬಾರದು ಎಂದರು.

ಇದಕ್ಕೆ ಸ್ಪಷ್ಟೀಕರಣ ನೀಡಿದ ಸಚಿವ ಮಾಧುಸ್ವಾಮಿ, ನಮಗೆ 24-25 ಸಾವಿರ ಕೋಟಿ ಜಿಎಸ್​ಟಿ ಹಣ ಬರಬೇಕು. ಸದ್ಯ 7 ಸಾವಿರ ಕೋಟಿ ರೂಪಾಯಿ ಬಂದಿದ್ದು, ಇನ್ನು 11 ಸಾವಿರ ಕೋಟಿ ಹಣಕ್ಕೆ ಕೇಂದ್ರ ಜವಾಬ್ದಾರಿ ನೀಡಿದೆ. ಒಂದೋ ಹಣ ಕೊಡಲಿದೆ ಇಲ್ಲವೇ ಅಷ್ಟೂ ಹಣದ ಸಾಲಕ್ಕೆ ಜವಾಬ್ದಾರಿ ವಹಿಸಿಕೊಂಡು ಅಸಲು ಬಡ್ಡಿ ತೀರಿಸಲಿದೆ. 7 ಸಾವಿರ ಕೋಟಿ ಬಾಕಿ ಉಳಿಯಲಿದೆ ಅದನ್ನು ಪಡೆಯಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗುತ್ತದೆ. ಆದರೆ, ನಮಗೆ ಕೊರೊನಾ ಕಾರಣಕ್ಕೆ ಆದಾಯ ನಷ್ಟವಾಗಿದ್ದು, ಪರಿಹಾರ ಕೊಡಲಾಗಿದೆ. ಬರ, ನೆರೆ, ಕೋವಿಡ್ ನಂತಹ ಸಂದರ್ಭಗಳಿಂದಾಗಿ ಆರ್ಥಿಕ ಸ್ಥಿತಿ ಏರುಪೇರಾಗಲಿದೆ.

ನಾವು ಇಷ್ಟೆಲ್ಲಾ ಆಸೆಯಿಂದ ಅಧಿಕಾರಕ್ಕೆ‌ ಬಂದರೂ ಹೊಸ ಕಾರ್ಯಕ್ರಮ ಘೋಷಣೆ ಮಾಡಲಾಗಲಿಲ್ಲ. 65 ಸಾವಿರ ಕೋಟಿ ಆದಾಯ ಕಡಿತವಾಗಿದೆ. ಜಿಎಸ್​ಟಿಗೂ ನಿರಂತರ ಒತ್ತಡ ಹಾಕುತ್ತಿದ್ದೇವೆ. ನಿರಂತರ ಮೂರು ವರ್ಷದಿಂದ ನೆರೆ, ಬರದಂತಹ ಸಮಸ್ಯೆ ಇದೆ, ಏನು ಮಾಡಬೇಕು ಹೇಳಿ? ಪ್ರಾಕೃತಿಕವಾಗಿ ಆದಾಯ ಬಾರದಿದ್ದರೆ, ಖರ್ಚು ಹೆಚ್ಚಾದರೆ ಏನು ಮಾಡಬೇಕು ಎಂದು ಪ್ರಶ್ನಿಸಿದರು. ಈ ವೇಳೆ ಪದೇಪದೆ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಜಿಎಸ್​ಟಿ ಬಗ್ಗೆಯೇ ಆಕ್ಷೇಪ ವ್ಯಕ್ತಪಡಿಸಿದ್ದು, ಮರಿತಿಬ್ಬೇಗೌಡ ಹಾಗೂ ಮಾಧುಸ್ವಾಮಿ ನಡುವೆ ಮಾತಿನ ಚಕಮಕಿ, ಗದ್ದಲಕ್ಕೆ ಕಾರಣವಾಯಿತು.

ನಂತರ ಹಿಂದಿನ ಸಾಲ ಸಾಕಾಯ್ತು ಎನ್ನುವ ಪ್ರಶ್ನೆಯನ್ನು ಮಾಧುಸ್ವಾಮಿ ಎತ್ತಿದರು. ಅನಿವಾರ್ಯತೆ ಕುರಿತು ವಿವರಣೆ ನೀಡಿದರು. ಈ ವೇಳೆ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶ ಮಾಡಿ, ಹಿಂದಿನ ಸರ್ಕಾರದ ವೇಳೆ ಉಸಿರಾಡಲು ಬಿಡದಂತೆ ಕುಮಾರಸ್ವಾಮಿ ಮೇಲೆ ಒತ್ತಡ ಹೇರಿದ್ದೀರಿ. ರೈತರ ಸಾಲ ಮನ್ನಾ ಮಾಡಿ‌ ಅಂತಾ ಪಟ್ಟು ಹಿಡಿದಿರಿ. ನಾವೂ ಸಾಲ ಮನ್ನಾ ಮಾಡಿದೆವು ಎಂದರು. ಆಗ ಬಿಜೆಪಿ ಸದಸ್ಯ ಎಂಟಿಬಿ ನಾಗರಾಜ್, ಪ್ರಣಾಳಿಕೆಯಲ್ಲಿ ಹೇಳಿದ್ದು ಮಾಡಿದ್ದಾರೆ. ಅದಕ್ಕೆ ಸಾಲ ಮಾಡಿ ಎಂದು ಹೇಳಿರಲಿಲ್ಲ ಎಂದರು. ಆ ಉತ್ತರಕ್ಕೆ ಹೊರಟ್ಟಿ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಸದಸ್ಯ ಮರಿತಿಬ್ಬೇಗೌಡ ಮತ್ತೆ ಮಾತು ಮುಂದುವರೆಸಿ ಜಿಎಸ್​ಟಿ ಎನ್ನುತ್ತಿದ್ದಂತೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದರು. ಈ ವೇಳೆ ಸಭಾನಾಯಕರ ಬಗ್ಗೆ ಮರಿತಿಬ್ಬೇಗೌಡ ಹಗುರವಾಗಿ ಮಾತನಾಡಿದರು. ಸಭಾನಾಯಕರಿಗೆ‌ ಗೌರವವಿಲ್ಲವೇ ಎಂದು ಬಿಜೆಪಿ ಸದಸ್ಯ ನಾರಾಯಣಸ್ವಾಮಿ ಕಿಡಿಕಾರಿದರು. ಈ ವೇಳೆ, ಮರಿತಿಬ್ಬೇಗೌಡ, ನಾರಾಯಣಸ್ವಾಮಿ ನಡುವೆ ಮಾತಿನ ಚಕಮಕಿ ನಡೆಯಿತು.

ಅಂತಿಮವಾಗಿ ಚರ್ಚೆಯ ಮೇಲೆ ಮಾತನಾಡಿದ ಪ್ರತಿಪಕ್ಷ ನಾಯಕ ಎಸ್. ಆರ್. ಪಟೀಲ್, ವೇತನ, ಭತ್ಯೆಯನ್ನೂ ಸಾಲಮಾಡಿ ಕೊಡುವ ಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ಆದರೂ ವಿತ್ತೀಯ ಕೊರತೆ ಮಿತ ಶೇ. 3 ಇರುವುದನ್ನು ಶೇ.4 ಕ್ಕೆ ಸೀಮಿತಿಗೊಳಿಸಿ ಸಾಕು. ಶೇ.5ರಷ್ಟು ಬೇಡ. ನಾವು ಕೂಡ ಸಾಲಕ್ಕೆ ಜವಾಬ್ದಾರಿ ಆಗಲಿದ್ದೇವೆ. ರಾಜ್ಯದ ಆರ್ಥಿಕ ದಿವಾಳಿಗೆ ಕಾರಣರಾಗುವುದು ಬೇಡ ಎಂದು ಮನವಿ ಮಾಡಿದರು.

ಬಿಲ್ ಮೇಲಿನ ಚರ್ಚೆಗೆ ಉತ್ತರಿಸಿದ ಸಚಿವ ಜೆ ಸಿ ಮಾಧುಸ್ವಾಮಿ, ಆರ್ಥಿಕ ಚಟುವಟಿಕೆ ಉತ್ತಮಗೊಂಡು ಆದಾಯ ಬಂದರೆ ಹೆಚ್ಚು ಸಾಲ ಮಾಡಲ್ಲ. ಅಗತ್ಯವಿರುವಷ್ಟು ಮಾತ್ರ ಸಾಲ‌ ಮಾಡಲಿದ್ದೇವೆ. ಆದರೆ, ಈಗ ಸಾಲ ಮಾಡುವುದು ಅನಿವಾರ್ಯ. ಶೇ.3ರಿಂದ ಶೇ.5ಕ್ಕೆ ವಿತ್ತೀಯ ಕೊರತೆ ಮಿತಿ ಹೆಚ್ಚಿಸುವ ಬಿಲ್ ಪಾಸ್ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ನಮ್ಮ ಮನವಿಯಂತೆ ಶೇ. 4ಕ್ಕೆ ಮಿತಿ ನಿಗದಿಪಡಿಸಲು ಒಪ್ಪಿಗೆ ನೀಡಲಿಲ್ಲ. ಹಾಗಾಗಿ, ಈ ವಿಧೇಯಕಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸಭಾತ್ಯಾಗ ಮಾಡಿದರು. ಕಾಂಗ್ರೆಸ್‌ ಸಭಾತ್ಯಾಗ, ಜೆಡಿಎಸ್ ಸದಸ್ಯರ ಗೈರಿನಲ್ಲಿ ಧ್ವನಿಮತದ ಮೂಲಕ ವಿಧೇಯಕ ಅಂಗೀಕರಿಸಲಾಯಿತು.

ABOUT THE AUTHOR

...view details