ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿಗಳ ಪಟ್ಟಿಹಿಡಿದು ರಾಜ್ಯ ನಾಯಕರು ಹೈಕಮಾಂಡ್ ಭೇಟಿಗೆ ತೆರಳುತ್ತಿದ್ದಾರೆ.
ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಅರುಣ್ ಕುಮಾರ್, ಅರವಿಂದ್ ಲಿಂಬಾವಳಿ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಸಂಜೆ 4.55 ರ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದಾರೆ.
ಪಕ್ಷದ ಕೋರ್ ಕಮಿಟಿಯಲ್ಲಿ ಫೈನಲ್ ಮಾಡಿರೋ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂದೆ ಇಡಲಿರೋ ನಾಯಕರು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಚರ್ಚೆ ನಡೆಸಲಿದ್ದಾರೆ. ಅಮಿತ್ ಶಾ ಓಕೆ ಎಂದ ಮೇಲೆ ಕೇಂದ್ರ ಚುನಾವಣಾ ಕಮಿಟಿ ಮುಂದೆ ಪಟ್ಟಿಯನ್ನು ಪ್ರಸ್ತುತ ಪಡಿಸಲಿದ್ದಾರೆ.
ನಾಳೆಯ ಪಟ್ಟಿಯಲ್ಲೇ ಬಹುತೇಕ ಟಿಕೆಟ್ ಅನೌನ್ಸ್ ಆಗೋ ಸಾಧ್ಯತೆ ಇದ್ದು, ಮಂಡ್ಯ ವಿಚಾರದಲ್ಲಿ ದೆಹಲಿ ನಾಯಕರ ತೀರ್ಮಾನವೇ ಅಂತಿಮವಾಗಲಿದೆ. ನಾಳೆ ಸುಮಲತಾ ತೀರ್ಮಾನ ಸ್ಪಷ್ಟವಾಗೋ ಸಾಧ್ಯತೆ ಇರುವ ಕಾರಣದಿಂದ ನಾಳೆ ಸಂಜೆಗೆ ಎಲ್ಲಾ ಕ್ಷೇತ್ರದ ಟಿಕೆಟ್ ಬಹುತೇಕ ಫೈನಲ್ ಆಗಲಿದೆ.