ಬೆಂಗಳೂರು: ಸಿಸಿಬಿಯ ಡಿಸಿಪಿ ಬಸವರಾಜ್ ಅಂಗಡಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ತಿಳಿಸಿದ್ದರು. ಈ ಹಿನ್ನೆಲೆ ಲಂಕೇಶ್ ವಿಚಾರಣೆಗೆಂದು ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದ್ದರು.
ನಗರ ಪೊಲೀಸ್ ಕಮೀಷನರ್ ಕಚೇರಿ ಬಳಿ ಮಾತನಾಡಿದ ಇಂದ್ರಜಿತ್ ಲಂಕೇಶ್, ಡಿಸಿಪಿ ಬಸವರಾಜ್ ಅಂಗಡಿ ನನಗೆ ಕರೆ ಮಾಡಿ ವಿಚಾರಣೆಗೆ ಬರುವಂತೆ ತಿಳಿಸಿದ್ದರು. ವಿಧಾನಸೌಧ ಪೊಲೀಸ್ ಭದ್ರತೆಗೆ ನಿಯೋಜನೆ ಹಿನ್ನೆಲೆ ಮತ್ತೊಂದು ದಿನ ಕರೆಯಿಸಿರುವುದಾಗಿ ತಿಳಿಸಿದ್ದಾರೆ. ಡ್ರಗ್ಸ್ ಮುಕ್ತ ಸಮಾಜಕ್ಕೆ ಕಳೆದ ಆರು ತಿಂಗಳಿಂದ ಸಿಸಿಬಿ ಪೊಲೀಸರಿಗೆ ಸಹಕಾರ ನೀಡಿದ್ದೇನೆ ಎಂದರು.
ಡ್ರಗ್ಸ್ ಕೇಸ್ ನಲ್ಲಿ ದೊಡ್ಡ ತಿಮಿಂಗಲ ಹಿಡಿಯಬೇಕಿದೆ ಎಂದ ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ ಡ್ರಗ್ಸ್ನಂಟು ಪ್ರಕರಣ ತನಿಖೆಯಲ್ಲಿ ಈಗಾಗಲೇ ಲಕ್ಷಾಂತರ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಸಣ್ಣ-ಸಣ್ಣ ಮೀನುಗಳನ್ನು ಹಿಡಿದಿರುವ ಪೊಲೀಸರು ಇನ್ನೂ ದೊಡ್ಡ ತಿಮಿಂಗಿಲಗಳಿದ್ದು, ಅವರನ್ನು ಹಿಡಿಯುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ವಿಧಾನಸಭಾ ಅಧಿವೇಶನದಲ್ಲಿ ವಿರೋಧ ಪಕ್ಷದವರಲ್ಲಿಯೂ ಡ್ರಗ್ಸ್ ಬಗ್ಗೆ ಮುಕ್ತ ಚರ್ಚೆ ನಡೆಸಬೇಕು. ಡಗ್ಸ್ ಹಾವಳಿಯಿಂದ ಸಮಾಜಕ್ಕೆ ತೊಂದರೆಯಾಗಿದೆ. ಯುವಕರಿಗೆ ಆ ಮಾದಕ ವಸ್ತು ಸಿಕ್ಕಿದರೆ ಏನಾಗ್ತಿತ್ತು ಅಂತ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ನಾನು ಪೊಲೀಸ್ ತನಿಖೆಗೆ ಸಹಕಾರ ನೀಡಿದ್ದೇನೆ. ನಾನು ಒಬ್ಬ ನಿರ್ದೇಶಕನಾಗಿ ಸಾಮಾನ್ಯ ವ್ಯಕ್ತಿಯಾಗಿ ಬೇಡಿಕೊಳ್ಳುತ್ತೇನೆ. ಸಾಕಷ್ಟು ಹೆಸರುಗಳು ಹೊರ ಬಂದಿವೆ. ರಾಜಕಾರಣಿಗಳು ಮತ್ತು ವಿದೇಶಿಗರು ಇರುವ ಸಾಧ್ಯತೆಯಿದೆ ಎಂದು ಲಂಕೇಶ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.