ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಸಿಎಂಗೆ ಮನವಿ ಮಾಡಿದ ಫಿಲ್ಮ್​​​ ಚೇಂಬರ್​ ನಿಯೋಗ - ಮೈಸೂರಿನಲ್ಲಿ ಫಿಲ್ಮ್​​​ಸಿಟಿ ಸ್ಥಾಪನೆಗೆ ಸಿಎಂ ಬಳಿ ಫಿಲ್ಮ್​​ ಚೇಂಬರ್ ಮನವಿ

ಚಿತ್ರನಗರಿಯನ್ನು ಮೈಸೂರಿನಲ್ಲಿ ನಿರ್ಮಿಸುವಂತೆ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇವೆ. ಇದರ ಜೊತೆ ಡಾ. ರಾಜ್​​​​​​​​​​​​​ಕುಮಾರ್ ಪ್ರತಿಷ್ಠಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಾ ಮನವಿ ಮಾಡಲಾಗಿದೆ ಎಂದು ನಿರ್ಮಾಪಕ ರಾಕ್​​​ಲೈನ್ ವೆಂಕಟೇಶ್ ಹೇಳಿದ್ದಾರೆ.

ಬಿಎಸ್​ವೈ, ಗುಬ್ಬಿ ಜೈರಾಜ್

By

Published : Oct 28, 2019, 5:41 PM IST

ಬೆಂಗಳೂರು: ರೋರಿಕ್ ಎಸ್ಟೇಟ್ ಬದಲು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಮನವಿ ಮಾಡಿದೆ.

ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಫಿಲ್ಮ್​ ಚೇಂಬರ್ ನಿಯೋಗ

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಇಂದು ಭೇಟಿ ನೀಡಿತ್ತು. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ನಿರ್ಧಾರ ಮಾಡಲಾಗಿತ್ತು. ನಂತರ ಮೈತ್ರಿ ಸರ್ಕಾರ ಬಂದಾಗ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಫಿಲ್ಮ್​​ ಸಿಟಿ ನಿರ್ಮಾಣ ಮಾಡುವ ಬಗ್ಗೆ ನಿರ್ಧಾರ ಮಾಡಿದ್ದರು. ಆದರೆ ಈಗ ಅದನ್ನು ರಾಮನಗರದಿಂದ ರೋರಿಕ್ ಎಸ್ಟೇಟ್​​​​​​​​ಗೆ ಸ್ಥಳಾಂತರ ಮಾಡಲಾಗಿದೆ. ಆದರೆ, ರೋರಿಕ್‌ ಎಸ್ಟೇಟ್ ಬದಲು ಮೈಸೂರಿನಲ್ಲೇ ಫಿಲ್ಮ್​​ ಸಿಟಿ ಸ್ಥಾಪಿಸುವಂತೆ ವಾಣಿಜ್ಯ ಮಂಡಳಿ, ಸಿಎಂಗೆ ಮನವಿ ಮಾಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ 70 ವರ್ಷ ತುಂಬಿದ ಹಿನ್ನೆಲೆ ವಾಣಿಜ್ಯ ಮಂಡಳಿಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡುವುದು, ಚಿತ್ರದಿಂದ ಬರುವ ರಾಜ್ಯದ ಪಾಲಿನ ಹಣವನ್ನು ಚಿತ್ರ ನಿರ್ಮಾಪಕರಿಗೆ ಹಿಂದಿರುಗಿಸುವುದು, ಏಕಗವಾಕ್ಷಿ ಪದ್ಧತಿ ಅನುಷ್ಠಾನ, ಚಿತ್ರೋದ್ಯಮದವರಿಗೆ ನಿವೇಶನ ಕಲ್ಪಿಸುವುದು, ರಾಜ್ಯದ ಯಾವುದೇ ಭಾಗದಲ್ಲಿ ಚಲನಚಿತ್ರಕ್ಕೆ ಸಂಬಂಧಿಸಿದಂತೆ ಅಪರಾಧ ನಡೆದಲ್ಲಿ ಬೆಂಗಳೂರಿನ ನ್ಯಾಯಾಲಯದಲ್ಲೇ ವಿಚಾರಣೆ ನಡೆಸುವುದು, ಚಿತ್ರಮಂದಿರಗಳ ಪರವಾನಗಿ ನವೀಕರಣ ಶುಲ್ಕ ಕಡಿತಗೊಳಿಸುವುದು ಸೇರಿದಂತೆ ಅನೇಕ ವಿಚಾರಗಳ ಕುರಿತು ಈ ವೇಳೆ ಚರ್ಚೆ ನಡೆಸಲಾಯಿತು.

ಸಿಎಂ ಭೇಟಿ ಬಳಿಕ‌ ಮಾತನಾಡಿದ ನಿರ್ಮಾಪಕ ರಾಕ್​​​​​​​​​ಲೈನ್ ವೆಂಕಟೇಶ್, ಚಿತ್ರನಗರಿಯನ್ನು ಮೈಸೂರಿನಲ್ಲಿ ನಿರ್ಮಿಸುವಂತೆ ಮನವಿ ಮಾಡಿದ್ದೇವೆ. ಇದರ ಜೊತೆ ಡಾ. ರಾಜ್​​​​​​​​​​​​​ಕುಮಾರ್ ಪ್ರತಿಷ್ಠಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ವಿಚಾರಕ್ಕೆ ಸಂಬಂಧಿಸಿದಂತೆ ಮನವಿ ಮಾಡಿದ್ದೇವೆ. ಈ ಹಿಂದೆ ಈ ಯೋಜನೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಒಪ್ಪಿದ್ದರು. ಜೊತೆಗೆ 22 ಕೋಟಿ ರೂಪಾಯಿ ನೀಡಲು ಕೂಡಾ ಒಪ್ಪಿದ್ದರು. ಇದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದು, ಅನುದಾನ ಕೊಡಲು ಅವರೂ ಒಪ್ಪಿದ್ದಾರೆ. ಡಾ. ಅಂಬರೀಶ್​​​​ ಅವರ ಪ್ರತಿಷ್ಠಾನಕ್ಕೂ ಒಂದು ಟ್ರಸ್ಟ್ ರಚನೆ ಆಗಬೇಕಿದೆ. ಮುಂದಿನ ತಿಂಗಳ 24ರೊಳಗೆ ಟ್ರಸ್ಟ್ ರಚಿಸಬೇಕೆಂದು ಸಿಎಂಗೆ ಮನವಿ ಮಾಡಿದ್ದೇವೆ. ಅದಕ್ಕೂ ಸಿಎಂ ಭರವಸೆ ನೀಡಿದ್ದಾರೆ ಎಂದು ರಾಕ್​ಲೈಕ್ ವೆಂಕಟೇಶ್ ಹೇಳಿದರು.

For All Latest Updates

TAGGED:

ABOUT THE AUTHOR

...view details