ಬೆಂಗಳೂರು :ಸಿನಿಮಾ ಥಿಯೇಟರ್‌ನಲ್ಲಿ 50-50 ರೂಲ್ಸ್ ಮುಂದುವರಿಕೆ ಹಿನ್ನೆಲೆ ಸರ್ಕಾರದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಅಸಮಾಧಾನಗೊಂಡಿದೆ. ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಸಿಎಂ ಬೊಮ್ಮಾಯಿ ಭೇಟಿಯಾಗಿ ನಿರ್ಬಂಧ ಸಡಿಲಿಸುವಂತೆ ಮನವಿ ಮಾಡಿತು.
ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್.ಎಂ ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿ ಸದಸ್ಯರ ನಿಯೋಗ ಸಿನಿಮಾ ಥಿಯೇಟರ್‌ನಲ್ಲಿ 50:50 ನಿಯಮ ಮುಂದುವರಿಸಿರುವ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿತು.
ಬಳಿಕ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ನಾವು ಸೋಮವಾರ ಮತ್ತೊಮ್ಮೆ ಸಿಎಂ ಭೇಟಿ ಮಾಡ್ತೇವೆ. ನಾವು ಎಸ್ಒಪಿ ನಿಯಮಗಳ ಪಾಲನೆ ಮಾಡಿ ಚಿತ್ರಮಂದಿರ ನಡೆಸುತ್ತೇವೆ. ಇದರ ಬಗ್ಗೆ ಸಿಎಂಗೆ ಮಾಹಿತಿ ಕೊಡುತ್ತೇವೆ.
ಚಿತ್ರಮಂದಿರಗಳ ಎಸಿ, ನಾನ್ ಎಸಿ ಮಾಹಿತಿ ಕೊಡುತ್ತೇವೆ. ಹಲವು ಚಿತ್ರಗಳು ಬಿಡುಗಡೆಗೆ ಕಾದಿವೆ. ಈಗಾಗಲೇ ಚಿತ್ರರಂಗಕ್ಕೆ ಸಾಕಷ್ಟು ನಷ್ಟವಾಗಿದೆ. ಮುಂದಿನ ಶುಕ್ರವಾರ ಸರ್ಕಾರ ನಿರ್ಬಂಧ ತೆರವು ಮಾಡುವ ವಿಶ್ವಾಸ ಇದೆ ಎಂದರು.