ಬೆಂಗಳೂರು :ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲು ಮಾಡಲಾಗಿದ್ದ ಪ್ರತ್ಯೇಕ ದೂರುಗಳಿಗೆ ಒಂದೇ ಚಾರ್ಜ್‌ಶೀಟ್ ಸಲ್ಲಿಸಿದ್ದ ಕ್ರಮವನ್ನು ಒಪ್ಪಲು ನಿರಾಕರಿಸಿರುವ ಹೈಕೋರ್ಟ್ ಪ್ರತ್ಯೇಕ ದೂರುಗಳಿಗೆ ಒಂದೇ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶವಿಲ್ಲ ಎಂದು ಆದೇಶಿಸಿದೆ.
ಹೂಡಿಕೆದಾರರಿಗೆ ವಂಚಿಸಿದ ಆರೋಪ ಪ್ರಕರಣದಲ್ಲಿ ಗ್ರೀನ್ ಬಡ್ಸ್ ಆಗ್ರೋ ಫಾರ್ಮ್ಸ್ ಲಿಮಿಟೆಡ್ ಕಂಪನಿ ಹಾಗೂ ಅದರ ನಾಲ್ವರು ನಿರ್ದೇಶಕರ ವಿರುದ್ಧ ಮಾಡಲಾಗಿದ್ದ ಆರೋಪಗಳನ್ನು ಕೈಬಿಟ್ಟಿದ್ದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಐಡಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ :ಕಂಪನಿ ತಮಗೆ ಸುಮಾರು 12.95 ಕೋಟಿ ರೂಪಾಯಿ ವಂಚಿಸಿದೆ ಎಂದು ಆರೋಪಿಸಿ ಹೂಡಿಕೆದಾರರು ಮೈಸೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಸಂರಕ್ಷಣಾ ಕಾಯ್ದೆ (ಕೆಪಿಐಡಿಎಫ್‌ಇ)ಅಡಿ ಉಪ ವಿಭಾಗಾಧಿಕಾರಿಯನ್ನು ಸಕ್ಷಮ ಪ್ರಾಧಿಕಾರವಾಗಿ ನೇಮಕ ಮಾಡಲಾಗಿತ್ತು.
ಈ ಎಫ್ಐಆರ್ಗಳ ತನಿಖೆ ನಡೆಸಿದ್ದ ಸಿಐಡಿ (ಆರ್ಥಿಕ ಮತ್ತು ವಿಚಕ್ಷಣಾ ವಿಭಾಗ) ಇನ್ಸ್ಪೆಕ್ಟರ್ ಎಲ್ಲಾ ದೂರುಗಳಿಗೂ ಒಂದೇ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ, 2016ರ ಆ.8ರಂದು ಕೆಪಿಐಡಿಎಫ್‌ಇ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಸಿಐಡಿ ಇನ್ಸ್‌ಪೆಕ್ಟರ್ ಸಕ್ಷಮ ಪ್ರಾಧಿಕಾರದ ಅಧಿಕಾರಿಯಲ್ಲ ಎಂದಿತ್ತು.
ಜತೆಗೆ ಚಾರ್ಚ್‌ಶೀಟ್ ರದ್ದು ಮಾಡಿ, ಆರೋಪಿಗಳ ವಿರುದ್ಧದ ಆರೋಪಗಳನ್ನು ಕೈಬಿಟ್ಟಿತ್ತು. ಹಾಗೆಯೇ, ತನಿಖಾಧಿಕಾರಿ ಐಪಿಸಿ ಸೆಕ್ಷನ್‌ಗಳ ಅಡಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಚಾರ್ಚ್‌ಶೀಟ್ ಸಲ್ಲಿಸಬಹುದು ಎಂದು ತಿಳಿಸಿಸಿತ್ತು. ಸೆಷನ್ಸ್ ಕೋರ್ಟ್ನ ಈ ಆದೇಶವನ್ನು ಪ್ರಶ್ನಿಸಿ ಸಿಐಡಿ ಹೈಕೋರ್ಟ್ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿತ್ತು.
ಹೈಕೋರ್ಟ್ ತೀರ್ಪು :ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಗೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟನ ನ್ಯಾಯಾಲಯಕ್ಕೆ ಸಲ್ಲಿಸಬಹುದು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ ಪ್ರತ್ಯೇಕ ದೂರುಗಳಿಗೆ ಒಂದೇ ಚಾರ್ಜ್‌ಶೀಟ್ ಸಲ್ಲಿಸಿರುವುದು ನಿಯಮ ಬಾಹಿರ.
ಸಿಐಡಿಗೆ ಒಂದೇ ದೋಷಾರೋಪ ಪಟ್ಟಿ ಸಲ್ಲಿಸಲು ಅಧಿಕಾರವಿಲ್ಲ. ಹೀಗಾಗಿ, ತನಿನಿಖಾಧಿಕಾರಿ ವಿವಿಧ ಠಾಣೆ ಪೊಲೀಸರು ದಾಖಲಿಸಿರುವ ಪ್ರತ್ಯೇಕ ಪ್ರಕರಣಗಳ ಸಂಬಂಧ ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸಬಹುದು. ಆ ಬಳಿಕ ವಿಶೇಷ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡು ಐಪಿಸಿ ಮತ್ತು ಕೆಪಿಐಡಿಎಫ್‌ಇ ಕಾಯ್ದೆ ಅಡಿ ವಿಚಾರಣೆ ನಡೆಸಿ ಕಾನೂನು ಪ್ರಕಾರ ಪ್ರಕರಣವನ್ನು ಇತ್ಯರ್ಥಪಡಿಸಬಹುದು ಎಂದು ಆದೇಶಿಸಿದೆ.
ಅಲ್ಲದೇ, ಕೆಪಿಐಡಿಎಫ್‌ಇ ಸಕ್ಷಮ ಪ್ರಾಧಿಕಾರದ ಅಧಿಕಾರಿಯು ತನ್ನ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಆ ವರದಿ ಆಧಾರದ ಮೇಲೆ ವಂಚನೆ ಮಾಡಿದ ಸಂಸ್ಥೆಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸಬೇಕು ಎಂದು ಆದೇಶಿಸಿದೆ. ಹಾಗೆಯೇ, ಚಾರ್ಜ್‌ಶೀಟ್ ರದ್ದು ಮಾಡಿ ಆರೋಪಿಗಳನ್ನು ಖುಲಾಸೆಗೊಳಿಸಿದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶ ಲೋಪದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟು ರದ್ದುಪಡಿಸಿದೆ.