ಬೆಂಗಳೂರು : ಕಂದಾಯ ಇಲಾಖೆಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಜೂನ್ 24 ರಿಂದ 30 ರವರೆಗೆ ‘ಕಡತ ವಿಲೇವಾರಿ ಸಪ್ತಾಹ’ ಆಚರಿಸಲು ಇಲಾಖೆ ನಿರ್ಧರಿಸಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ.24ರಿಂದ ವಿಧಾನಸೌಧದಲ್ಲಿ ಕಡತ ವಿಲೇವಾರಿ ಸಪ್ತಾಹ ಸಾಮಾನ್ಯ ಕಡತಗಳ ಜತೆಗೆ ವಿಶೇಷವಾಗಿ ದೀರ್ಘಕಾಲದಿಂದ ಬಾಕಿ ಉಳಿದ ಕಡತಗಳನ್ನು ವಿಲೇವಾರಿ ಮಾಡಲಾಗುವುದು. ಶೀಘ್ರ ವಿಲೇವಾರಿಯಲ್ಲಿ ಕಡ್ಡಾಯವಾಗಿ ಪಾರದರ್ಶಕತೆ ಹಾಗೂ ನಿಯಮ ಪಾಲನೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಡತಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಇಲಾಖೆ ಮುಖ್ಯಸ್ಥರು, ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಲು ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಈ ಹಿಂದೆಯೂ ಸಹ ಕಂದಾಯ ಇಲಾಖೆಯಲ್ಲಿ ಬಾಕಿ ಇದ್ದ ಕಡತಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಕಳೆದ ವರ್ಷ ಕಡತ ವಿಲೇವಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿತ್ತು ಎಂದರು.
ಕಳೆದ ಬಾರಿ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ್ದರಿಂದ ಸಪ್ತಾಹದ ಅವಧಿಯಲ್ಲಿ ರಾಜ್ಯಾದ್ಯಂತ 2.50 ಲಕ್ಷಕ್ಕೂ ಅಧಿಕ ಕಡತಗಳನ್ನು ವಿಲೇ ಮಾಡಲಾಗಿತ್ತು. ಈಗ ಮತ್ತೆ ಈ ಸಪ್ತಾಹವನ್ನು ಕೈಗೊಂಡಿದ್ದೇವೆ ಎಂದು ಸಚಿವರು ತಿಳಿಸಿದರು.
ಸಪ್ತಾಹದ ಕೊನೆ ದಿನವಾದ ಜೂನ್ 30ರ ನಂತರ ಎಲ್ಲಾ ಅಧಿಕಾರಿಗಳು ಸಪ್ತಾಹದ ಆರಂಭದಲ್ಲಿ ಬಾಕಿ ಇದ್ದ ಕಡತಗಳು, ಸಪ್ತಾಹದ ಅವಧಿಯಲ್ಲಿ ವಿಲೇವಾರಿ ಮಾಡಲಾದ ಮತ್ತು ಅಂತ್ಯದಲ್ಲಿ ಬಾಕಿ ಇರುವ ಕಡತಗಳ ವಿವರವನ್ನು ಕ್ರೊಢೀಕರಿಸಿ ಜುಲೈ 2ರ ಒಳಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.