ಬೆಂಗಳೂರು: ಲಾಲ್‍ಬಾಗ್ ಸಿದ್ಧಾಪುರದ ಜಮೀನುಗಳ ಕುರಿತು ಸುಳ್ಳು ಮಾಹಿತಿಯನ್ನು ಬಿಡುಗಡೆ ಮಾಡಿರುವವರ ಕುರಿತು ಸರ್ಕಾರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಜೊತೆಗೆ 2008ರಿಂದ ಇದುವರೆಗೆ ಬೆಂಗಳೂರು ಮತ್ತು ರಾಜ್ಯದ ವಿವಿಧ ನಗರಗಳಲ್ಲಿ ಮಾಡಿರುವ ಭೂ ಉಪಯೋಗ ಬದಲಾವಣೆಯ (ಚೇಂಜ್ ಆಫ್ ಲ್ಯಾಂಡ್ ಯೂಸ್) ಪ್ರತಿ ಪ್ರಕರಣದ ಮಾಹಿತಿಯನ್ನೂ ಕೂಡಲೆ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದ ಬಿಜೆಪಿಯವರಿಗೆ ಮೆದುಳು ಮತ್ತು ನಾಲಿಗೆ ಮಧ್ಯದ ಸಂಪರ್ಕ ಸಂಪೂರ್ಣ ಕಡಿದು ಹೋಗಿದೆ. ಅದರಲ್ಲೂ ವಿಶೇಷವಾಗಿ ನನ್ನನ್ನು ಗುರಿಯಾಗಿರಿಸಿಕೊಂಡು ಅಪಪ್ರಚಾರ ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿಯೆ ಕಳೆದ ವಾರ ಬಿಜೆಪಿಯ ಸುಳ್ಳಿನ ಮರಿ ಯಂತ್ರವೊಂದು ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದೆಯೆಂದು ಕೆಲವು ಮಾಧ್ಯಮಗಳು ಅದಕ್ಕೆ ಭರಪೂರ ಪ್ರಚಾರ ಕೊಟ್ಟವು. ಚುನಾವಣೆ ಹತ್ತಿರಕ್ಕೆ ಬಂದಂತೆಲ್ಲ ಬಿಜೆಪಿಯ ಸುಳ್ಳಿನ ಅಭಿಯಾನ ತೀವ್ರಗೊಳ್ಳುತ್ತದೆ. ಆದ್ದರಿಂದ ಜನರು ಮೆದುಳು ಮತ್ತು ಹೃದಯ ಎರಡನ್ನೂ ಕಳೆದುಕೊಂಡಿರುವ ಬಿಜೆಪಿಯ ಸುಳ್ಳಿನ ಯಂತ್ರಗಳು ಹರಿ ಬಿಡುವ ಮಾತುಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ಕೋರುತ್ತೇನೆ ಎಂದಿದ್ದಾರೆ.
ಕಳೆದ ವಾರ ನಾನು ಪಾದಯಾತ್ರೆಯಲ್ಲಿದ್ದಾಗ ಬಿಜೆಪಿಯವರು ಬಿಡುಗಡೆ ಮಾಡಲಾದ ಮಾಹಿತಿ ಇದು. ಲಾಲ್‍ಬಾಗ್ ಸಿದ್ಧಾಪುರ ಗ್ರಾಮದ ಸರ್ವೆ ನಂ 27/1, 28/4, 5, 6ರಲ್ಲಿನ 2 ಎಕರೆ 39.5 ಗುಂಟೆ ಜಮೀನನ್ನು ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದಾರೆ, ರೀಡೂ ಮಾಡಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿರುವುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದೆ.
ಹಾಗಿದ್ದರೆ ವಾಸ್ತವ ಸಂಗತಿ ಏನು? ಬಿಡಿಎನಿಂದ ನಾನು ಪಡೆದುಕೊಂಡ ಮಾಹಿತಿ ಪ್ರಕಾರ, ಈ ಜಮೀನುಗಳನ್ನು 1948ರಲ್ಲಿ ಕನಕನಪಾಳ್ಯ 8 ನೇ ಬ್ಲಾಕ್‍ಗೆಂದು ಭೂ ಸ್ವಾಧೀನಪಡಿಸಿಕೊಂಡು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಯಾವ ಕಾರಣದಿಂದಲೋ ಏನೋ ಸದರಿ ಜಮೀನುಗಳನ್ನು ಭೂಸ್ವಾಧೀನದಿಂದ ಕೈ ಬಿಟ್ಟು 11/2/1954 ಮತ್ತು 28/12/1954 ರ ದಿನಾಂಕಗಳಂದು 'ದಿ ಮೈಸೂರು ಗೆಜೆಟ್' ನಲ್ಲಿ ಪ್ರಕಟವಾಗಿದೆಯೆಂಬ ಮಾಹಿತಿ ಇದೆ ಎಂದಿದ್ದಾರೆ.
ಬಿಜೆಪಿಯವರಿಗೆ ಈ ಎಲ್ಲ ವಾಸ್ತವಾಂಶಗಳು ಗೊತ್ತಿದ್ದರೂ ಸಹ ಸುಳ್ಳಿನ ದುರ್ಗಂಧದ ವಿಷವನ್ನು ಜನರ ಮನಸ್ಸಿನಲ್ಲಿ ತುಂಬಲು ಪ್ರಯತ್ನಿಸುತ್ತಿದ್ದಾರೆ. 1954 ರಲ್ಲೆ ಡಿ ನೋಟಿಫಿಕೇಷನ್ ಆಗಿರುವ ಜಮೀನುಗಳನ್ನು ಸಿದ್ದರಾಮಯ್ಯನವರು ಡಿನೋಟಿಫಿಕೇಷನ್ ಮಾಡಿದ್ದಾರೆ ಎನ್ನುವವರು ಎಂಥಾ ನೀಚರು ಹಾಗೂ ಅನೈತಿಕ ವ್ಯಕ್ತಿಗಳು ಎಂಬುದನ್ನು ರಾಜ್ಯದ ಜನ ಅರ್ಥ ಮಾಡಿಕೊಳ್ಳಬೇಕು. 1954 ರಲ್ಲಿ ಈ ಜಮೀನುಗಳನ್ನು ಡಿನೋಟಿಫಿಕೇಷನ್ ಮಾಡಿದ ನಂತರ ಅವು ಸಂಬಂಧಿತ ಭೂ ಮಾಲಿಕರ ಜಮೀನುಗಳಾಗುತ್ತವೆ.
ಈ ಜಮೀನುಗಳನ್ನು 2007ರಲ್ಲಿ ನಗರದ ಮಾಸ್ಟರ್ ಪ್ಲಾನ್ ಮಾಡುವಾಗ (ಆರ್ಎಂಪಿ) ಸದರಿ ಜಾಗವನ್ನು ಪಾರ್ಕ್ಗೆಂದು ಗುರುತಿಸಲಾಗಿದೆ. ಖಾಸಗಿಯವರ ಜಾಗದಲ್ಲಿ ಪಾರ್ಕ್ ಮಾಡುವುದಿದ್ದರೆ ಆ ಜಾಗವನ್ನು ಭೂಸ್ವಾಧೀನ ಮಾಡಿಕೊಂಡು ಭೂ ಮಾಲೀಕರಿಗೆ ಪರಿಹಾರ ಕೊಡಬೇಕು. ಬಿಜೆಪಿಯವರೇ ಹೇಳುವ ಪ್ರಕಾರ ಈ ಜಮೀನುಗಳು 200 ಕೋಟಿ ರೂಪಾಯಿ ಬೆಲೆ ಬಾಳುವುದಿದ್ದರೆ, 3 ಎಕರೆ ಜಾಗವನ್ನು ವಶಪಡಿಸಿಕೊಂಡು ಪಾರ್ಕ್ ಮಾಡಲು ಬಿಡಿಎ ಬಳಿಯಾಗಲಿ, ಬಿಬಿಎಂಪಿ ಬಳಿಯಾಗಲಿ ಹಣ ಇದೆಯೆ? 2007 ರಲ್ಲಿ ಮಾಡಿದ ಆರ್ಎಂಪಿಯು ಕೆಟಿಸಿಪಿ ಕಾಯ್ದೆಯ ಪ್ರಕಾರ 5 ವರ್ಷಗಳ ಒಳಗೆ ಅನುಷ್ಠಾನಗೊಳ್ಳಬೇಕು ಎಂದು ವಿವರಿಸಿದ್ದಾರೆ.