ಬೆಂಗಳೂರು:ನಮ್ಮ ಮೆಟ್ರೋ ನಿಲ್ದಾಣದಲ್ಲಿ ಪ್ರಾಂಕ್ ಮಾಡಿದ ಯುವಕನ ವಿರುದ್ಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಯುವಕ ರೈಲಿನಲ್ಲಿ ಪ್ರಯಾಣಿಸುವಾಗ ಮೂರ್ಛೆ ಬಂದವನಂತೆ ವರ್ತಿಸಿದ್ದ. ಇದರಿಂದ ಸಹ ಪ್ರಯಾಣಿಕರು ಕೆಲಕಾಲ ಭಯಭೀತರಾಗಿದ್ದರು. ಇದರ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದ್ದು, ವೈರಲ್ ಆಗಿತ್ತು.
ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಮೂವರು ಪ್ರಯಾಣಿಕರ ಪೈಕಿ ಪ್ರಾಂಕ್ ಪ್ರಜ್ಜು ಎಂಬಾತ ಬೋಗಿಯಲ್ಲಿ ನಿಂತಿದ್ದಾಗ ಮೂರ್ಛೆ ಬಂದವನಂತೆ ವರ್ತಿಸಿದ್ದ. ಈ ದೃಶ್ಯವನ್ನು ಮೊಬೈಲ್ ಮುಖಾಂತರ ಆತನ ಸ್ನೇಹಿತರ ಸಹಾಯದಿಂದ ವಿಡಿಯೋ ಮಾಡಿಸಿದ್ದ. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ. ಸದ್ಯ ಯುವಕನನ್ನು ಠಾಣೆಗೆ ಕರೆಯಿಸಿ ಸೂಕ್ತ ತಿಳುವಳಿಕೆ ನೀಡಿ, ಇನ್ನೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.