ಬೆಂಗಳೂರು:ಎರಡನೇ ಪತ್ನಿಯ ಸೀಮಂತದ ಸಂದರ್ಭದಲ್ಲೇ ಮೊದಲ ಪತ್ನಿಯು ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ, ಸಿನಿಮೀಯ ಶೈಲಿಯಲ್ಲಿ ಮಾರಾಮಾರಿ ನಡೆದಿರುವ ಘಟನೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ತನ್ನ ಪತಿ ತನಗೆ ಮೋಸ ಮಾಡಿ ಬೇರೆ ಮಹಿಳೆಯೊಂದಿಗೆ ಮದುವೆ ಮಾಡಿಕೊಂದ್ದಾನೆ. ಅಲ್ಲದೆ, ಸೀಮಂತ ಕಾರ್ಯವನ್ನೂ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಾಗಲೂರು ಮೂಲದ ಮಹಿಳೆ (ಮೊದಲ ಪತ್ನಿ) ಚಂದ್ರಾಲೇಔಟ್ನಲ್ಲಿ ತನ್ನ ಗಂಡನ ಎರಡನೇ ಹೆಂಡತಿ ಮನೆಯಲ್ಲಿ ಮಹಿಳಾ ಸಂಘಟನೆಯೊಂದಿಗೆ ತೆರಳಿ ಗಲಾಟೆ ಮಾಡಿದ್ದಾಳೆ.
ಚಂದ್ರಾಲೇಔಟ್ನಲ್ಲಿ ಎರಡನೇ ಹೆಂಡತಿ ಮನೆಯಲ್ಲಿ ವಾಸವಾಗಿದ್ದ ಎಂದು ಹೇಳಲಾಗುತ್ತಿರುವ ತೇಜಸ್ ಎಂಬುವರ ವಿರುದ್ಧ ಮೊದಲ ಪತ್ನಿ ಆರೋಪ ಹೊರಿಸಿದ್ದು, ಸ್ಥಳಕ್ಕೆ ತೆರಳಿ ಗಲಾಟೆ ಮಾಡಿದ್ದಾರೆ. ಮಹಿಳೆ ಹಾಗೂ ತೇಜಸ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನೋಡ ನೋಡುತ್ತಿದ್ದಂತೆ ದೊಡ್ಡ ಹೈಡ್ರಾಮ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸ್ಥಳೀಯರು ಗಲಾಟೆ ಬಗ್ಗೆ ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿದ್ದಾರೆ. ಆಗ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ್ದ ಪೊಲೀಸರು, ಸದ್ಯ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.
ಗಲಾಟೆಗೆ ಕಾರಣ?:ಮಹಿಳೆ (ಮೊದಲ ಪತ್ನಿ) ಹಾಗೂ ತೇಜಸ್ಗೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕ್ರಮೇಣ ವೈಮನಸ್ಸು ಮೂಡಿ, ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಒಂದು ವರ್ಷದಿಂದಲೂ ಪರಸ್ಪರ ದೂರವಾಗಿದ್ದರು. ಈ ನಡುವೆ ತೇಜಸ್ ಮತ್ತೊಬ್ಬಳೊಂದಿಗೆ ಮದುವೆ ಆಗಿದ್ದಾನೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಎರಡನೇ ಹೆಂಡತಿಯ ಸೀಮಂತ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ಅರಿತ ಮೊದಲ ಪತ್ನಿ ನೇರವಾಗಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಇದಕ್ಕೆ ತಗಾದೆ ತೆಗೆದ ತೇಜಸ್ ಮನೆಯವರು ಸೀಮಂತ ಕಾರ್ಯಕ್ರಮ ನಡೆಯುತ್ತಿಲ್ಲ. ಬದಲಾಗಿ ತಂಗಿ ಮಗಳ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು ಎಂದು ಸಬೂಬು ಹೇಳಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.