ದೊಡ್ಡಬಳ್ಳಾಪುರ:ಗ್ರಾಮದ ಅಭಿವೃದ್ಧಿಗೆ ಮೀಸಲಾಗಿದ್ದ ಮೂರು ಎಕರೆ ಗೋಮಾಳ ಜಾಗ ಭೂಗಳ್ಳರಿಂದ ಒತ್ತುವರಿಯಾಗಿದೆ. ಇದೇ ಜಾಗಕ್ಕಾಗಿ ಗ್ರಾಮಸ್ಥರು ಪರಸ್ಪರ ಕಿತ್ತಾಡುತ್ತಿದ್ದು, ಗ್ರಾಮದ ನೆಮ್ಮದಿ ಕೆಡಿಸಿದೆ. ಒತ್ತುವರಿ ತೆರವುಗೊಳಿಸಿ ಗ್ರಾಮದ ಅಭಿವೃದ್ಧಿಗೆ ಬಳಸುವಂತಾಗಲು ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಜಾಗದ ವಿಚಾರವಾಗಿ ಗ್ರಾಮಸ್ಥರ ನಡುವೆ ಕಿತ್ತಾಟ- ನಂಜೇಗೌಡ ಪ್ರತಿಕ್ರಿಯೆ ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿಯಲ್ಲಿ ಸರ್ಕಾರ ರೈತರಿಗೆ ಜಮೀನು ಮಂಜೂರು ಮಾಡಿತ್ತು. ಸರ್ವೇ ನಂಬರ್ 188ರ 3 ಎಕರೆ ಜಾಗವನ್ನು ಮಾರುತಿ ಯುವಕರ ಸಂಘಕ್ಕೆ ನೀಡಲಾಗಿತ್ತು. ಈ ಜಾಗವನ್ನು ಹರಾಜಿಗಿಟ್ಟು ಬಂದ ಹಣವನ್ನು ದೇವಸ್ಥಾನದ ಪೂಜಾ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದರು. 15 ವರ್ಷಗಳ ಹಿಂದೆ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿದೆ. ಖಾಲಿ ಜಾಗದ ಮೇಲೆ ಕಣ್ಣಿಟ್ಟ ಪಕ್ಕದ ಗ್ರಾಮ ಬಚ್ಚಹಳ್ಳಿಯ ಸಂತೋಷ್ ಎಂಬವರು ಗೋಮಾಳ ಜಾಗವನ್ನು ಉಳುಮೆ ಮಾಡಿ ಒತ್ತುವರಿ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.
ಇದರ ವಿರುದ್ಧ ತಿರುಮಗೊಂಡನಹಳ್ಳಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ ಸಂತೋಷ ಆ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಗೋಮಾಳದ ಜಾಗದಲ್ಲಿಯೇ ನೀರಿಗಾಗಿ ಬೋರ್ವೆಲ್ ಕೊರೆಸಲಾಗಿದ್ದು, ನೀರನ್ನು ಸಹ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಪಕ್ಕದ ಗ್ರಾಮದ ಸಂತೋಷ್ ಎನ್ನುವ ವ್ಯಕ್ತಿಯೇ ನಮ್ಮ ಗ್ರಾಮದ ಜಾಗವನ್ನು ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿದ್ದಾರೆ. ಏಳೆಂಟು ಜನರು ಒತ್ತುವರಿಗೆ ಮುಂದಾಗಿದ್ದಾರೆ ಎಂದು ಗ್ರಾಮಸ್ಥ ನಂಜೇಗೌಡ ಆರೋಪಿಸಿದ್ದಾರೆ.
ಇದನ್ನೂ ಓದಿ:ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಮುಂದಾದ ಹು-ಧಾ ಮಹಾನಗರ ಪಾಲಿಕೆ
ಈ ಜಾಗ ನಮಗೆ ಸೇರಿದ್ದು ಎಂದು ಗ್ರಾಮಸ್ಥರು ಪರಸ್ಪರ ಕಿತ್ತಾಡುತ್ತಿದ್ದಾರೆ. ಒಟ್ಟಾರೆ ಗೋಮಾಳ ಜಾಗದಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಪ್ರತಿ ವರ್ಷ ಉಳುಮೆ ಮಾಡುವ ಸಮಯದಲ್ಲಿ ಕಿತ್ತಾಡುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಈ ಜಾಗವನ್ನು ಗುರುತಿಸಿ, ಒತ್ತುವರಿ ತೆರವುಗೊಳಿಸಿ, ಗ್ರಾಮದ ಅಭಿವೃದ್ಧಿಗೆ ಬಳಕೆ ಮಾಡುವಂತೆ ಮಾಡಬೇಕು. ಮತ್ತು ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂಬುದು ಗ್ರಾಮಸ್ಥರ ಮನವಿ.