ದೇವನಹಳ್ಳಿ :ತಮಿಳುನಾಡಿನಲ್ಲಿ ಭಾರಿ ಮಳೆಯಿಂದ ಚೆನ್ನೈ ಏರ್ ಪೋರ್ಟ್ನಲ್ಲಿ ತಾತ್ಕಾಲಿಕವಾಗಿ ಆಗಮನ ಕಾರ್ಯಾಚರಣೆ ರದ್ದು ಮಾಡಲಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ವಿಮಾನಗಳನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಡೈವರ್ಟ್ ಮಾಡಲಾಗಿದೆ.
ಕಳೆದ ರಾತ್ರಿಯಿಂದ ಈವರೆಗೂ 33 ವಿಮಾನಗಳನ್ನ ಬೆಂಗಳೂರಿನತ್ತ ಡೈವರ್ಟ್ ಮಾಡಲಾಗಿದೆ. ಎಮಿರೇಟ್ಸ್, ಲೂಪ್ತಾನ್ಸ್, ಏರ್ ಇಂಡಿಯಾ ಏಕ್ಸ್ಪ್ರೆಸ್ ಸೇರಿದಂತೆ 33 ವಿಮಾನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ.
ಮುಂಜಾನೆಯಿಂದಲೇ ವಿವಿಧ ರಾಜ್ಯಗಳಿಂದ, ವಿದೇಶಗಳಿಂದ ಬಂದ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಕಾಯುತ್ತಿದ್ದಾರೆ. ಮಳೆ ಕಡಿಮೆಯಾದ್ರೆ ಚೆನ್ನೈಗೆ ಹೋಗಲು ಕಾಯುತ್ತಿದ್ದಾರೆ. ಹವಾಮಾನ ವೈಪರೀತ್ಯ ಹಿನ್ನೆಲೆ ಬೆಂಗಳೂರಿನಿಂದ ತಿರುಪತಿ ಮತ್ತು ವಿಜಯವಾಡಗೆ ಹೋಗಬೇಕಿದ್ದ ವಿಮಾನಗಳು ರದ್ದಾಗುವ ಅಥವಾ ವಿಳಂಬವಾಗುವುದಾಗಿ ಬಿಐಎಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ಏರ್ಪೋರ್ಟ್ನ ರನ್ ವೇಯಲ್ಲಿ ನೀರು ನಿಂತ ಪರಿಣಾಮ ಸೋಮವಾರ ರಾತ್ರಿ 11 ಗಂಟೆವರೆಗೂ ವಿಮಾನಗಳ ಆಗಮನ ಮತ್ತು ನಿರ್ಗಮನ ರದ್ದು ಮಾಡಲಾಗಿದೆ. ಮಂಗಳವಾರವೂ ಸಹ ಮಳೆಯ ಆರ್ಭಟ ಹೆಚ್ಚಾಗುವ ಸಾಧ್ಯತೆ ಇರುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದ್ದು, ವಿಮಾನ ಹಾರಾಟದಲ್ಲಿ ಮತ್ತಷ್ಟು ವ್ಯತ್ಯಯವಾಗಲಿದೆ.
ಚೆನ್ನೈಯಿಂದ ಬೆಂಗಳೂರು ಏರ್ಪೋರ್ಟ್ಗೆ ಬಂದ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಕಾಯುತ್ತಿದ್ದು, ಮಳೆಯ ಆರ್ಭಟ ಕಡಿಮೆಯಾದ ನಂತರ ತಮ್ಮ ಪ್ರಯಾಣ ಮುಂದುವರಿಸಲಿದ್ದಾರೆ. ಮತ್ತೆ ಕೆಲವು ಪ್ರಯಾಣಿಕರು ರಸ್ತೆ ಮಾರ್ಗದಲ್ಲಿ ಚೆನ್ನೈನತ್ತ ಪ್ರಯಾಣ ಬೆಳೆಸಿದ್ದಾರೆ.
70 ವಿಮಾನಗಳ ಹಾರಾಟ ಬಂದ್:ಚೆನ್ನೈ ವಿಮಾನ ನಿಲ್ದಾಣದಿಂದ ಇಂದು ಹೊರಡಬೇಕಿದ್ದ ಎಲ್ಲ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಸುಮಾರು 70 ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ರನ್‌ವೇ ಮತ್ತು ಟಾರ್‌ಮ್ಯಾಕ್‌ಗಳು ಜಲಾವೃತವಾಗಿವೆ. ಇದರಿಂದ ಅಹಮದಾಬಾದ್, ತಿರುವನಂತಪುರಂ, ದುಬೈ, ಶ್ರೀಲಂಕಾ ಸೇರಿದಂತೆ ಹಲವಾರು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ.
ಕರ್ನಾಟಕದಿಂದಲೂ ರೈಲು ಸಂಚಾರ ರದ್ದು:ತಮಿಳುನಾಡಿನಲ್ಲಿ ಭೀಕರ ಮಳೆಯಾಗುತ್ತಿರುವ ಕಾರಣ ಕರ್ನಾಟಕದಿಂದ ಅಲ್ಲಿಗೆ ತೆರಳಬೇಕಿದ್ದ 10 ಕ್ಕೂ ಅಧಿಕ ರೈಲುಗಳನ್ನು ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬಿರುಗಾಳಿ ಸಹಿತ ಸುರಿಯುತ್ತಿರುವ ಭಾರಿ ಮಳೆ ನೀರು ಬಹುತೇಕ ರೈಲ್ವೇ ನಿಲ್ದಾಣಗಳಲ್ಲಿ ನುಗ್ಗಿದೆ. ಕೆಲವೆಡೆ ಗುಡ್ಡ ಕುಸಿತವೂ ಉಂಟಾಗಿದೆ. ಹೀಗಾಗಿ ತಮಿಳುನಾಡು ಭಾಗಕ್ಕೆ ಇಂದು ರೈಲ್ವೇ ಸೇವೆ ಇರುವುದಿಲ್ಲ. ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೇ ಇಲಾಖೆ ಮನವಿ ಮಾಡಿದೆ.
ಇದನ್ನೂ ಓದಿ:ಮಿಚೌಂಗ್ ಅಬ್ಬರಕ್ಕೆ ಚೆನ್ನೈ ರೈಲು ನಿಲ್ದಾಣ, ಏರ್ಪೋರ್ಟ್ ರನ್‌ವೇ ಮೇಲೆ ನೀರು: ವಿಮಾನಗಳು ಬೆಂಗಳೂರಿಗೆ ಡೈವರ್ಟ್