ಬೆಂಗಳೂರು:ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಣ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ನಗರದ ಪ್ರೆಸ್ ಕ್ಲಬ್ನಲ್ಲಿ ಗಲಾಟೆ ನಡೆದಿದೆ. ಎರಡು ಗುಂಪಿನವರು ಪರಸ್ಪರ ಗದ್ದಲದ ವೇಳೆ ಕೈಕೈ ಮಿಲಾಯಿಸಿದರು.
ಕೋಡಿಹಳ್ಳಿ ಪರ ಕೆಲವು ರೈತರು ಹಾಗೂ ಜೆಡಿಎಸ್ ಹೆಚ್.ಡಿ ಕುಮಾರಸ್ವಾಮಿ ಪರವಾದ ಕೆಲ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಇದೇ ವೇಳೆ, ಕೋಡಿಹಳ್ಳಿ ಬಣದ ಕಾರ್ಯಕರ್ತರು ಕಪ್ಪು ಮಸಿ ಎರಚಿದ ಘಟನೆಯೂ ನಡೆಯಿತು. ಪೊಲೀಸರ ಎದುರೇ ಗಲಾಟೆ ನಡೆದಿದ್ದು, ಎರಡು ಹೊಯ್ಸಳ ವಾಹನ ಭದ್ರತೆಗೆ ನಿಯೋಜಿಸಿದ್ದರೂ ಕೆಲಕಾಲ ತಡೆಯಲು ಸಾಧ್ಯವಾಗಲಿಲ್ಲ.
ಕೋಡಿಹಳ್ಳಿ ಚಂದ್ರಶೇಖರ್ ಬಣ - ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ನಾವು ಪ್ರೆಸ್ ಕ್ಲಬ್ಗೆ ಬರುವಾಗ ಮಾಜಿ ಸಿಎಂ ಕುಮಾರಸ್ವಾಮಿ ಬೆಂಬಲಿಗರು ಅಡೆತಡೆ ಮಾಡಿದರು. ಕುಮಾರಸ್ವಾಮಿಯವರೇ ಇಂತಹ ಕೆಲಸ ಮಾಡಬೇಡಿ, ಬೆಂಬಲಿಗರನ್ನ ಬಿಟ್ಟು ಘರ್ಷಣೆ ಮಾಡಿಸಬೇಡಿ. ಹತಾಶರಾಗಿ ಈ ರೀತಿ ಮಾಡುವುದು ಸರಿಯಲ್ಲ. ಏನೇ ಇದ್ದರೂ ಮುಖಾಮುಖಿ ಮಾತನಾಡಲು ಬನ್ನಿ, ಎಲ್ಲವನ್ನೂ ನಾವು ಚರ್ಚೆ ಮಾಡೋಣ ಎಂದು ತಿಳಿಸಿದರು.
ನಾನು ಯಾವ ಸಚಿವರು, ಅಧಿಕಾರಿಯನ್ನೂ ಭೇಟಿ ಮಾಡಿಲ್ಲ. ಒಬ್ಬ ವ್ಯಕ್ತಿ ಬಂದು ಎಷ್ಟು ಕೊಡಲಿ ಎಂದು ಕೇಳಿದರೆ, ನಾನೇನಾದರೂ ಹಣ ಪಡೆದಿದ್ದರೆ ಅದು ಅಪರಾಧವಾಗಿದೆ. ರಾಜ್ಯದ ರೈತ ಚಳವಳಿ ಚಾರಿತ್ರಿಕ ಚಳವಳಿ, ಅದನ್ನು ನಾನು ಮುಂಚೂಣಿಯಲ್ಲಿ ಕಂಡಿದ್ದೇನೆ. ನಾನು ಭ್ರಷ್ಟಾಚಾರ ವಿರೋಧಿಸುವವನು, ನನ್ನ ನೈತಿಕತೆಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ. ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿಎಂಗೆ ಕೋಡಿಹಳ್ಳಿ ಮನವಿ ಮಾಡಿದರು.
ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಕ್ರಿಯೆ ಮಾನ್ಯರೇ, ನೀವು ಆರೋಪ ಮಾಡಿ, ಆದರೆ ನೀವೇನು ಸುಪ್ರೀಂಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳೇನಲ್ಲ. ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಲಾಗಿದೆ. ನಾನು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳಿದ್ದೇನೆ. ಈ ಬಗ್ಗೆ ಅವರಿಗೆ ನೀಡಬೇಕಾದ ಮಾಹಿತಿ ಸಲ್ಲಿಸುತ್ತೇನೆ. ರಾಜ್ಯದ ಮಾಧ್ಯಮಗಳ ಬಗ್ಗೆ ವಿಶೇಷ ಗೌರವವಿದೆ. ನಾನು ತಪ್ಪು ಮಾಡಿದರೆ ಕ್ರಮ ಆಗಬೇಕಲ್ವಾ? ಯಾರು ಮಾಡಿದ್ದಾರೋ ಅವರ ಮೇಲೂ ಕ್ರಮ ಆಗಬೇಕಲ್ಲ. ಸರ್ಕಾರವು ನನ್ನ ಮೇಲಿನ ಆರೋಪದ ಬಗ್ಗೆ ಸ್ವತಂತ್ರ ಸಂಸ್ಥೆಗೆ ತನಿಖೆಗೆ ನೀಡಲಿ ಎಂದು ಕೋಡಿಹಳ್ಳಿ ಆಗ್ರಹಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಮೊದಲು ಆರ್ಯರಾ, ದ್ರಾವಿಡರಾ ಅನ್ನೋದನ್ನು ಹೇಳಲಿ: ಸಿಎಂ ಬೊಮ್ಮಾಯಿ ತಿರುಗೇಟು