ಬೆಂಗಳೂರು : ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಹೆಚ್ಚಳವಾಗಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಮುಂದಿನ ದಿನಗಳಲ್ಲಿ ನಗರದಲ್ಲಿ ಅಳವಡಿಕೆಯಾಗುವ ಪ್ರತಿ ಅನಧಿಕೃತ ಜಾಹೀರಾತು ಫಲಕಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ 50 ಸಾವಿರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ಸೂಚನೆ ನೀಡಿದೆ.
ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್‌ಗಳ ಹಾವಳಿ ತಡೆಯಲು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಮಾಯಿಗೇಗೌಡ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಅಲ್ಲದೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಗರದಲ್ಲಿ ಅನಧಿಕೃತವಾಗಿ ಸುಮಾರು 60 ಸಾವಿರ ಜಾಹೀರಾತು ಫಲಕಗಳು ಅಳವಡಿಕೆಯಾಗಿವೆ. ಅದರಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್ ದಾಖಲಿಸಲಾಗಿದೆ. ಅನಧಿಕೃತ ಜಾಹೀರಾತು ಫಲಕ ಅಳವಡಿಕೆ ತಡೆಯಲು ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಜಾಹೀರಾತು ಫಲಕ ಅಳವಡಿಕೆದಾರರ ವಿರುದ್ಧ ದಂಡ ಸಹ ವಿಧಿಸಿಲ್ಲ. ಈ ಹಾವಳಿ ತಡೆಯಲು ವಿಫಲವಾಗಿರುವ ಅಧೀನ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವನ್ನೂ ಜರುಗಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ.
ಜತೆಗೆ, ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ಪ್ರಕರಣಗಳ ಸಂಬಂಧ ದಾಖಲಿಸಿರುವ ದೂರು ಹಾಗೂ ಎಫ್‌ಐಆರ್‌ಗಳ ಕುರಿತು ಮಾಹಿತಿ ಸಲ್ಲಿಸಬೇಕು. ಅಕ್ರಮ ಜಾಹೀರಾತು ಫಲಕಗಳನ್ನು ಅಳವಡಿಕೆಗೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಸಹ ಏಕೆ ದಂಡ ವಿಧಿಸಿಲ್ಲ?. 59,413 ಅಕ್ರಮ ಜಾಹೀರಾತುಗಳ ಅಳವಡಿಕೆ ಪ್ರಕರಣಗಳಲ್ಲಿ ಕೇವಲ 134 ದೂರುಗಳನ್ನು ಪರಿಗಣಿಸಿ 40 ಎಫ್‌ಐಆರ್ ಏಕೆ ದಾಖಲಿಸಲಾಗಿದೆ?. ಅನಧಿಕೃತ ಜಾಹೀರಾತು ತಡೆಯುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಯಾವೆಲ್ಲಾ ಕ್ರಮ ಜರುಗಿಸಲಾಗುತ್ತದೆ? ಎಂಬ ಬಗ್ಗೆ ವಿವರಣೆ ನೀಡಿ ಮೂರು ವಾರದಲ್ಲಿ ವರದಿ ಸಲ್ಲಿಸಬೇಕು.
ಅಲ್ಲದೆ, ಮೂರು ವಾರಗಳ ನಂತರ ಅನಧಿಕೃತವಾಗಿ ಹೋರ್ಡಿಂಗ್ಸ್, ಬ್ಯಾನರ್ ಹಾಗೂ ಫ್ಲೆಕ್ಸ್ ಸೇರಿದಂತೆ ಇನ್ನಿತರ ಜಾಹೀರಾತು ಫಲಕ ನಗರದಲ್ಲಿ ಅಳವಡಿಕೆಯಾದರೆ, ಆ ಪ್ರತಿಯೊಂದು ಜಾಹೀರಾತು ಫಲಕ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತಲಾ 50 ಸಾವಿರ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂದು ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.
ವರದಿ ತಳ್ಳಿ ಹಾಕಿದ ಹೈಕೋರ್ಟ್:ಅಕ್ರಮ ಜಾಹೀರಾತು ಫಲಕಗಳ ಹಾವಳಿ ತಡೆಯುವ ಮತ್ತು ಅವುಗಳನ್ನು ತೆರವುಗೊಳಿಸುವ ಸಂಬಂಧ ಹೈಕೋರ್ಟ್ ನಿರ್ದೇಶನಗಳ ಪಾಲನೆ ಮಾಡಿರುವ ಬಗ್ಗೆ ಬಿಬಿಎಂಪಿ ಸಲ್ಲಿಸಿದ ಅನುಪಾಲನಾ ವರದಿಯನ್ನು ಹೈಕೋರ್ಟ್ ತಳ್ಳಿಹಾಕಿತು.
ಈ ಅನುಪಾಲನಾ ವರದಿ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಯಾವುದೇ ಕ್ರಮ ಜರುಗಿಸದೆ ಇದ್ದರೂ ಅನುಪಾಲನಾ ವರದಿಯೆಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಪಾಲಿಕೆ ಅಧಿಕಾರಿಗಳ ದಿಟ್ಟತನ ಬಹಳ ಆಶ್ಚರ್ಯ ಮೂಡಿಸಿದೆ. ಈ ನಡಾವಳಿಯು ಪಾಲಿಕೆ ಅಧಿಕಾರಿಗಳು ಅನಧಿಕೃತವಾಗಿ ಜಾಹೀರಾತು ಅಳವಡಿಕೆ ಮಾಡುವವರ ವಿರುದ್ಧ ಕ್ರಮ ಜರುಗಿಸುವ ಯಾವುದೇ ಆಸಕ್ತಿ ಇಲ್ಲವೆಂಬುದು ತೋರಿಸುತ್ತದೆ ಎಂದು ಪೀಠ ತಿಳಿಸಿತು.
ಪಂಚವಾರ್ಷಿಕ ಯೋಜನೆಯೇ?:ವಿಚಾರಣೆ ವೇಳೆ ಜಾಹೀರಾತು ಫಲಕಗಳನ್ನು ಯಾವಾಗ ಸಂಪೂರ್ಣ ತೆರವುಗೊಳಿಸಲಾಗುತ್ತದೆ ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಬಿಬಿಎಂಪಿ ವಕೀಲರು ನಿರ್ದಿಷ್ಟ ಉತ್ತರ ನೀಡಲಿಲ್ಲ. ಇದಕ್ಕೆ ಬೇಸರಗೊಂಡ ನ್ಯಾಯಪೀಠ, ಜಾಹೀರಾತುಗಳನ್ನು ತೆರವುಗೊಳಿಸಲು ಬಿಬಿಎಂಪಿ ಪಂಚವಾರ್ಷಿಕ ಯೋಜನೆ ರೂಪಿಸಲು ನಿರ್ಧರಿಸಿದೆಯೇ? ಶುಭಮಹೂರ್ತ ನಿಗದಿಪಡಿಸಲು ಪರಿಣಿತರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆಯೇ? ಬೆಂಗಳೂರು ನಗರ ಸುಂದರವಾಗಿ ಕಾಣುವುದು ಬಿಬಿಎಂಪಿ, ಸರ್ಕಾರಕ್ಕೆ ಇಷ್ಟವಿಲ್ಲವೇ? ನಗರ ಸುಂದರವಾಗಿ ಕಾಣುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಲ್ಲವೇ? ನಗರದಲ್ಲಿ ಜಾಹೀರಾತು ಹಾವಳಿಯಿದ್ದರೆ ಹೊರ ಪ್ರದೇಶಗಳಿಂದ ಬರುವವರಿಗೆ ಯಾವ ಭಾವನೆ ಮೂಡುತ್ತದೆ? ಎಂದು ಪ್ರಶ್ನಿಸುವ ಮೂಲಕ ಸರ್ಕಾರ ಮತ್ತು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಫ್ಲೆಕ್ಸ್ ಬ್ಯಾನರ್ ಅಳವಡಿಸುವವರ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತೀವ್ರ ತರಾಟೆ