ಕರ್ನಾಟಕ

karnataka

ETV Bharat / state

15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ: ಕೆಂಪಣ್ಣ - Pending bill for contractors in government departments

ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುವುದು ಹಾಗೂ ಪ್ಯಾಕೇಜ್‌ ಪದ್ದತಿಯ ಅಡಿಯಲ್ಲಿ ಟೆಂಡರ್‌ ಕರೆಯುವುದನ್ನು ರದ್ದುಪಡಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿ , ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

fierce-fight-across-state-if-contractors-do-not-respond-to-issue-within-15-days-kempanna
15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ

By

Published : Jan 21, 2021, 12:10 AM IST

ಬೆಂಗಳೂರು: 15 ದಿನಗಳಲ್ಲಿ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಬಿಲ್​ಗಳಿಗೆ ಹಣ ಬಿಡುಗಡೆ ಮಾಡುವುದು ಹಾಗೂ ಪ್ಯಾಕೇಜ್‌ ಪದ್ದತಿಯ ಅಡಿಯಲ್ಲಿ ಟೆಂಡರ್‌ ಕರೆಯುವುದನ್ನು ರದ್ದುಪಡಿಸುವಂತೆ ಹಲವಾರು ಬಾರಿ ಮುಖ್ಯಮಂತ್ರಿ, ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ಕೋವಿಡ್‌-19 ಸಂಕಷ್ಟ ರಾಜ್ಯದಲ್ಲಿ ಆವರಿಸಿದ ನಂತರ ರಾಜ್ಯ ಸರ್ಕಾರ ನಮ್ಮೆಲ್ಲ ವಹಿವಾಟುಗಳಿಗೆ ತಾತ್ಕಾಲಿಕವಾಗಿ ಹಲವಾರು ನಿರ್ಬಂಧಗಳನ್ನು ಹೇರಿದೆ. ಇದರ ಪರಿಣಾಮ ರಾಜ್ಯದ ಒಂದು ಲಕ್ಷಕ್ಕೂ ಅಧಿಕ ನೋಂದಾಯಿತ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೆಲವು ಅಧಿಕಾರಿಗಳು ಗುತ್ತಿಗೆದಾರರಿಗೆ ಸರ್ಕಾರಿ ಟೆಂಡರ್‌ಗಳಲ್ಲಿ ಭಾಗವಹಿಸದಂತೆ ನಿರ್ಬಂಧವನ್ನು ಹೇರುತ್ತಿದ್ದಾರೆ. ಇದರ ಹೊರತಾಗಿ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿ ಬಿಡ್‌ ಸಲ್ಲಿಸಿದ ನಂತರವೂ ಟೆಂಡರನ್ನು ಹಿಂಪಡೆಯುವಂತೆ ಒತ್ತಡ ತಂತ್ರವನ್ನು ಅನುಸರಿಸುತ್ತಿದ್ದಾರೆ. ಇದರಿಂದ ಟೆಂಡರ್‌ನಲ್ಲಿ ಸ್ಪರ್ಧಾತ್ಮಕ ದರಗಳಿಂದ ವಂಚಿತವಾಗಿ ಹೆಚ್ಚಿನ ಪಾರದರ್ಶಕತೆಗೆ ಅವಕಾಶವಿಲ್ಲದೆ ರಾಜ್ಯದ ತೆರಿಗೆದಾರರ ಹಣ ವ್ಯರ್ಥವಾಗುತ್ತಿದ್ದು, ಗುತ್ತಿಗೆದಾರರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತಿದೆ ಎಂದರು.
ಪ್ಯಾಕೇಜ್‌ ಪದ್ದತಿಯಲ್ಲಿ ಟೆಂಡರ್ ಗಳನ್ನು ಕರೆಯುತ್ತಿರುವುದರಿಂದ ನಮ್ಮ ರಾಜ್ಯದ ಸ್ಥಳೀಯ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ಭಾಗವಹಿಸದಂತಹ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ. ಅಲ್ಲದೆ, ಇದು ಹೊರ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಆದ್ದರಿಂದ, ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಪ್ಯಾಕೇಜ್‌ ಪದ್ದತಿಯಲ್ಲಿ ಟೆಂಡರ್‌ ಕರೆಯುವುದನ್ನು ನಿಲ್ಲಿಸಿ ಒಂದೊಂದು ಕಾಮಗಾರಿಗಳಿಗೂ ಪ್ರತ್ಯೇಕವಾಗಿ ಟೆಂಡರ್‌ ಕರೆಯುವಂತೆ ಮನವಿ ಮಾಡಿದರು.
ದ್ವಿ ಲಕೋಟೆ ಪ್ಯಾಕೇಜ್‌ ಪದ್ದತಿಯಲ್ಲಿ ಸರಿಯಾದ ಮಾನದಂಡಗಳಿಲ್ಲದೆ ಎಲ್ಲ ಷರತ್ತುಗಳನ್ನು ತಮ್ಮ ಇಚ್ಚೆಗೆ ಬಂದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸುತ್ತಿರುವುದು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಂಡುಬಂದಿದೆ. ಕರ್ನಾಟಕ ರಾಜ್ಯ ಟೆಂಡರ್‌ನಲ್ಲಿ ಭಾಗವಹಿಸುವ ಗುತ್ತಿಗೆದಾರರಿಗೆ ಏಕರೂಪ ನಿಯಮವನ್ನು ರಾಜ್ಯಕ್ಕೆ ಅನ್ವಯವಾಗುವಂತಹ ನಿಯಮಾವಳಿಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು.
ಓದಿ:ನೂತನ ಸಚಿವರ ಖಾತೆ ಹಂಚಿಕೆ ಪಟ್ಟಿ ನಾಳೆ ಬೆಳಗ್ಗೆ ಬಿಡುಗಡೆ: ಸಿಎಂ ಸ್ಪಷ್ಟನೆ

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ ಎಂ ರವೀಂದ್ರ ಮಾತನಾಡಿ, ನೆರೆ ರಾಜ್ಯವಾದ ಕೇರಳದಲ್ಲಿ ರೂ.5 ಕೋಟಿವರೆಗಿನ ಕಾಮಗಾರಿಯನ್ನು ಒಂದು ಲಕೋಟೆ ಪದ್ದತಿಯಲ್ಲಿ ಯಾವುದೇ ಪೂರ್ವಭಾಗಿ ಷರತ್ತುಗಳಿಲ್ಲದೆ ಗುತ್ತಿಗೆದಾರರು ನೊಂದಣಿಯಾಗಿರುವ ಆಯಾ ದರ್ಜೆಗೆ ಅನುಗುಣವಾಗಿ ಟೆಂಡರ್‌ನಲ್ಲಿ ಭಾಗವಹಿಸುವ ನಿಯಮ ಜಾರಿಯಲ್ಲಿರುತ್ತದೆ. ಇದೇ ಮಾದರಿಯ ನಿಯಮವನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿದರೆ ಸ್ಥಳೀಯ ನಿವಾಸಿಗಳಾದ ರಾಜ್ಯದ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿ ಕಾಮಗಾರಿ ಪಡೆಯುವಂತಹ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

ABOUT THE AUTHOR

...view details