ಕರ್ನಾಟಕ

karnataka

By

Published : Mar 20, 2022, 7:07 PM IST

ETV Bharat / state

ಈ ಬಾರಿ ಉತ್ತಮ ಮಳೆ ನಿರೀಕ್ಷೆ: ರಾಜ್ಯದಲ್ಲಿ ರಸಗೊಬ್ಬರ ಬೇಡಿಕೆ,ದಾಸ್ತಾನು ಇಷ್ಟಿದೆ..

ಕಳೆದ ಬಾರಿ 43.41 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟಗೊಂಡಿದ್ದು, ಈ ಬಾರಿ 45 ಲಕ್ಷ ಮೆಟ್ರಿಕ್ ಟನ್ ದಾಟುವ ನಿರೀಕ್ಷೆ ಇದೆ. ಹತ್ತಿರ ಹತ್ತಿರ 6 ಲಕ್ಷ ಮೆಟ್ರಿಕ್ ಟನ್‌ನಷ್ಟು ದಾಸ್ತಾನಿದ್ದರೂ ಅದು ತುರ್ತು ಹೊಂದಾಣಿಕೆಗೆ ಮೀಸಲು ಇರಿಸಬೇಕಾಗಿದೆ. ಹಾಗಾಗಿ, ಈ ಬಾರಿಯೂ ಬಹುತೇಕ ಬಳಕೆಗೆ ತಕ್ಕಷ್ಟೇ ದಾಸ್ತಾನು ಪಡೆದುಕೊಳ್ಳಬೇಕಿದೆ..

ರಸಗೊಬ್ಬರ
ರಸಗೊಬ್ಬರ

ಬೆಂಗಳೂರು :ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಅಗತ್ಯವಿರುವ ಹೆಚ್ಚುವರಿ ಪ್ರಮಾಣದ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಕೃಷಿ ಇಲಾಖೆ ಮುಂದಾಗಿದೆ.

ಕಳೆದ ಸಾಲಿನಲ್ಲಿ 43.41 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಮಾರಾಟಗೊಂಡಿದೆ. ಈ ಬಾರಿ 45 ಲಕ್ಷ ಮೆಟ್ರಿಕ್ ಟನ್‌ಗೆ ಹೆಚ್ಚುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ದಾಸ್ತಾನು ಹೆಚ್ಚಳಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. 2021-22ರ ಸಾಲಿನಲ್ಲಿ ಉತ್ತಮ ಮಳೆಯಾದ ಕಾರಣ ಬೆಳೆಗಳ ಬಿತ್ತನೆ ವಿಸ್ತೀರ್ಣ ಹೆಚ್ಚಾಗಿದ್ದು, ರಸಗೊಬ್ಬರದ ಬೇಡಿಕೆಯೂ ದ್ವಿಗುಣವಾಗಲಿದೆ.

2021ರ ಮುಂಗಾರ ಹಂಗಾಮಿನಲ್ಲಿ 35.64 ಲಕ್ಷ ಮೆಟ್ರಿಕ್ ಟನ್ ವಿವಿಧ ಶ್ರೇಣಿಯ ರಸಗೊಬ್ಬರದಲ್ಲಿ 28.53 ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟವಾಗಿತ್ತು. 7.09 ಲಕ್ಷ ಮೆಟ್ರಿಕ್ ಟನ್ ಮುಂಗಾರು ಹಂಗಾಮಿನಲ್ಲಿ ಉಳಿಕೆಯಾಗಿತ್ತು. ನಂತರ ಹಿಂಗಾರು ಹಂಗಾಮಿನಲ್ಲಿ ಮುಂಗಾರಿನ ಉಳಿಕೆ ಸೇರಿ 20.22 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಅದರಲ್ಲಿ 14.30 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗಿ 5.93 ಲಕ್ಷ ಮೆಟ್ರಿಕ್ ಟನ್ ಉಳಿದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಟ್ಟು ಬೇಡಿಕೆ 43.41 ಲಕ್ಷ ಮೆಟ್ರಿಕ್ ಟನ್‌ಗೆ ಅನುಗುಣವಾಗಿ 42.64 ಲಕ್ಷ ಮೆಟ್ರಿಕ್ ಟನ್ ಪ್ರಮಾಣದ ರಸಗೊಬ್ಬರವನ್ನು ಕಳೆದ ಸಾಲಿನಲ್ಲಿ ಹಂಚಿಕೆ ಮಾಡಿದೆ. ಹಿಂದಿನ ಸಾಲಿನಲ್ಲಿ ಮಾರಾಟವಾಗದೆ ರಾಜ್ಯದಲ್ಲಿ ಉಳಿದಿದ್ದ ರಸಗೊಬ್ಬರ ದಾಸ್ತಾನು ಪ್ರಮಾಣ ನೋಡಿಕೊಂಡು ಕೇಂದ್ರ ಸರ್ಕಾರ ರಸಗೊಬ್ಬರ ಹಂಚಿಕೆ ಮಾಡಿದೆ.

ಪ್ರಸ್ತುತ ರಾಜ್ಯದಲ್ಲಿ 5.93 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ :ಪ್ರಸ್ತುತ ರಾಜ್ಯದಲ್ಲಿ 3.08 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 0.51 ಲಕ್ಷ ಮೆಟ್ರಿಕ್ ಟನ್ ಡಿಎಪಿ, 0.20 ಲಕ್ಷ ಮೆಟ್ರಿಕ್ ಟನ್ ಎಂಒಪಿ, 2.13 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್‌ ಸೇರಿ ಒಟ್ಟು 5.93 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನಿದೆ.

ಮುಂಗಾರು ಬಿತ್ತನೆ ಕಾರ್ಯ ಆರಂಭಕ್ಕೆ ಯಾವುದೇ ರೀತಿಯಲ್ಲಿ ರಸಗೊಬ್ಬರ ಕೊರತೆ ಆಗುವುದಿಲ್ಲ. ಬೇಡಿಕೆಗೆ ತಕ್ಕಂತೆ ರಸಗೊಬ್ಬರ ಪೂರೈಕೆ ಮಾಡಲಾಗುತ್ತದೆ. ಕೇಂದ್ರದೊಂದಿಗೆ ನಮ್ಮ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದ್ದಾರೆ.

ಕಳೆದ ಬಾರಿ 43.41 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಮಾರಾಟಗೊಂಡಿದ್ದು, ಈ ಬಾರಿ 45 ಲಕ್ಷ ಮೆಟ್ರಿಕ್ ಟನ್ ದಾಟುವ ನಿರೀಕ್ಷೆ ಇದೆ. ಹತ್ತಿರ ಹತ್ತಿರ 6 ಲಕ್ಷ ಮೆಟ್ರಿಕ್ ಟನ್‌ನಷ್ಟು ದಾಸ್ತಾನಿದ್ದರೂ ಅದು ತುರ್ತು ಹೊಂದಾಣಿಕೆಗೆ ಮೀಸಲು ಇರಿಸಬೇಕಾಗಿದೆ. ಹಾಗಾಗಿ, ಈ ಬಾರಿಯೂ ಬಹುತೇಕ ಬಳಕೆಗೆ ತಕ್ಕಷ್ಟೇ ದಾಸ್ತಾನು ಪಡೆದುಕೊಳ್ಳಬೇಕಿದೆ.

ಆ ನಿಟ್ಟಿನಲ್ಲಿ ಹಂತ ಹಂತವಾಗಿ ಬಿತ್ತನೆ ಕಾರ್ಯ ಆರಂಭ, ರಸಗೊಬ್ಬರ ಬೇಡಿಕೆಗೆ ತಕ್ಕಂತೆ ರಸಗೊಬ್ಬರ ತರಿಸಿಕೊಂಡು ವಿತರಿಸಲಾಗುತ್ತದೆ. 45 ಲಕ್ಷ ಟನ್ ರಸಗೊಬ್ಬರ ಒಟ್ಟಿಗೆ ಬಳಕೆಯಾಗಲ್ಲ, ಮುಂಗಾರು ಮತ್ತು ಹಿಂಗಾರು ಎರಡು ಹಂತದಲ್ಲಿ ರಸಗೊಬ್ಬರ ಬೇಕಾಗಲಿದ್ದು, ಹಂತ ಹಂತವಾಗಿ ಕೇಂದ್ರದಿಂದ ತರಿಸಿಕೊಳ್ಳಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿವಿಧ ಬೆಳೆಗಳ ವಿಸ್ತೀರ್ಣದ ಆಧಾರದ ಮೇಲೆ ರಸಗೊಬ್ಬರ ವಿತರಣೆ :ಪ್ರತಿ ಹಂಗಾಮಿನ ಪೂರ್ವದಲ್ಲಿಯೇ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸಲ್ಲಿಸುವ ವಿವಿಧ ಬೆಳೆಗಳ ವಿಸ್ತೀರ್ಣದ ಆಧಾರದ ಮೇಲೆ ನೀಡಬಹುದಾದ ರಸಗೊಬ್ಬರದ ಪ್ರಮಾಣ, ಹಿಂದಿನ ಹಂಗಾಮುಗಳಲ್ಲಿ ರಸಗೊಬ್ಬರಗಳ ಅತಿ ಹೆಚ್ಚಿನ ಬಳಕೆ, ಹಾಲಿ ದಾಸ್ತಾನುಗಳನ್ನು ಗಣನೆಗೆ ತೆಗೆದುಕೊಂಡು ರಸಗೊಬ್ಬರಗಳ ಗ್ರೇಡ್‌ಗಳ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಮಾಹೆವಾರು ಸಂಸ್ಥೆವಾರು ವಿವಿಧ ರಸಗೊಬ್ಬರಗಳನ್ನು ಹಂಚಿಕೆ ಮಾಡಲಾಗುತ್ತದೆ. ಪ್ರತಿ ಮಾಹೆಯಲ್ಲಿ ಹಂಚಿಕೆ ಮಾಡಲಾಗಿರುವ ರಸಗೊಬ್ಬರಗಳನ್ನು ಜಿಲ್ಲಾವಾರು ನಿಗದಿಪಡಿಸಿ ಜಿಲ್ಲಾವಾರು ನಿಗದಿಪಡಿಸಿರುವ ರಸಗೊಬ್ಬರಗಳನ್ನು ತಯಾರಕ ಸಂಸ್ಥೆಯವರಿಂದ ನೇರವಾಗಿ ಮಹಾಮಂಡಳ, ಸಹಕಾರ ಸಂಘಗಳು ಹಾಗೂ ಖಾಸಗಿ ಸಂಸ್ಥೆಯವರ ಮುಖಾಂತರ ಸಮರ್ಪಕ ರೀತಿ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರತಿ ವಾರ ವಿಡಿಯೋ ಸಂವಾದ ನಡೆಸಿ ಸಮರ್ಪಕ ವಿತರಣೆಗೆ ಕ್ರಮ :ರಸಗೊಬ್ಬರ ತಯಾರಕ ಸಂಸ್ಥೆಗಳ ಪ್ರನಿಧಿಗಳೊಡನೆ ಪ್ರತಿ ವಾರ ವಿಡಿಯೋ ಕಾನ್ಸರೆನ್ಸ್ ಮುಖಾಂತರ ಸಭೆ ನಡೆಸಿ, ರಾಜ್ಯಕ್ಕೆ ರಸಗೊಬ್ಬರದ ಸಮರ್ಪಕ ನಿರ್ವಹಣೆಗೆ ಕ್ರಮವಹಿಸಲಾಗಿದೆ. ಹಾಗೆಯೇ ಪ್ರತಿ ಮಂಗಳವಾರ ಕೇಂದ್ರ ರಸಗೊಬ್ಬರ ಮಂತ್ರಾಲಯವು ಸಹ ರಸಗೊಬ್ಬರದ ಸಮರ್ಪಕ ಪೂರೈಕೆ ಮತ್ತು ವಿತರಣೆ ಕುರಿತು ರಾಜ್ಯಗಳೊಂದಿಗೆ ಸಂವಾದ ನಡೆಸುತ್ತಿದೆ.

01.04.2021ರಿಂದ ಇಲ್ಲಿಯವರೆಗೆ ಒಟ್ಟು 48 ವಿಡಿಯೋ ಸಂವಾದ ನಡೆಸಿ ಸಮರ್ಪಕ ವಿತರಣೆಗೆ ಕ್ರಮವಹಿಸಲಾಗಿದೆ. ರಸಗೊಬ್ಬರದ ರೇಕುಗಳು ನಿಲುಗಡೆಯಾಗಿದ್ದಲ್ಲಿ, ರೈಲ್ವೆ ಇಲಾಖಾಧಿಕಾರಿಗಳೊಡನೆ ಸಂಪರ್ಕ ಪಡೆದು ರಾಜ್ಯಕ್ಕೆ ಸಕಾಲದಲ್ಲಿ ರಸಗೊಬ್ಬರ ಸರಬರಾಜಾಗಲು ಕ್ರಮವಹಿಸಲಾಗಿದೆ.

ಅಲ್ಲದೇ ರಾಜ್ಯದಲ್ಲಿ, ಕಾಪು ದಾಸ್ತಾನು ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಮುಖಾಂತರ ರಸಗೊಬ್ಬರವನ್ನು ದಾಸ್ತಾನು ಮಾಡಿ ಸಮರ್ಪಕವಾಗಿ ವಿತರಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿ ಉತ್ತಮ ಮುಂಗಾರು ಆರಂಭದ ನಿರೀಕ್ಷೆಯಲ್ಲಿರುವ ರೈತರಿಗೆ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗದಂತೆ ರಸಗೊಬ್ಬರ ಪೂರೈಸಲು ಕೃಷಿ ಇಲಾಖೆ ಸಜ್ಜಾಗಿದೆ. ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಲು ಮುಂದಾಗಿದೆ.

ABOUT THE AUTHOR

...view details