ಬೆಂಗಳೂರು : ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ 20 ಲಕ್ಷ ಮೌಲ್ಯದ 374 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ ಕೆಲಸದಾಕೆಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಮೀನಾಕ್ಷಿನಗರದಲ್ಲಿ ವಾಸವಾಗಿದ್ದ ಮನೆ ಮಾಲಕಿ ರಂಜಿತಾ ನೀಡಿದ ದೂರಿನ ಮೇರೆಗೆ 53 ವರ್ಷದ ಲಕ್ಷ್ಮಮ್ಮ ಎಂಬುವಳನ್ನು ಬಂಧಿಸಿದ್ದಾರೆ.
ಮೀನಾಕ್ಷಿ ನಗರದಲ್ಲಿ ವಾಸವಾಗಿದ್ದ ಆರೋಪಿ ಕಳೆದ 9 ತಿಂಗಳಿಂದ ರಂಜಿತಾ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಈ ಮಧ್ಯೆ ರಂಜಿತಾ ಅವರು ತಮ್ಮ ಮಾವನಿಗೆ ಚಿನ್ನದ ಸರ ಕೊಡುವ ಸಲುವಾಗಿ ಕಬೋರ್ಡ್ ತೆಗೆದು ನೋಡಿದಾಗ ಚಿನ್ನಾಭರಣವಾಗಿರುವುದು ಬೆಳಕಿಗೆ ಬಂದಿತ್ತು. ಎಲ್ಲಾ ರೀತಿ ಶೋಧ ನಡೆಸಿದರೂ ಚಿನ್ನ ಪತ್ತೆಯಾಗದ ಹಿನ್ನೆಲೆ ಮನೆ ಕೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.
ಮಾಲೀಕರ ಮನೆಯಲ್ಲಿ ಚಿನ್ನ ಕಳ್ಳತನ ಲಕ್ಷ್ಮಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ದುರಾಸೆಗೆ ಒಳಗಾಗಿ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕದ್ದ ಚಿನ್ನಾಭರಣವನ್ನು ಮನೆಯಲ್ಲಿ ಇಟ್ಟುಕೊಂಡು ಏನು ಮಾಡಿಲ್ಲವೆಂಬಂತೆ ಸುಮ್ಮನಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೇಂಟರ್ನಿಂದ ಮಾಲೀಕರ ಮನೆಯಲ್ಲಿ ಚಿನ್ನ ಕಳ್ಳತನ : ಇತ್ತೀಚೆಗೆ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರ ಮನೆಗೆ ಬಣ್ಣ ಬಳಿಯಲು ಬಂದಿದ್ದ ಪೇಂಟರ್ ಮಾಲೀಕರ ಕಣ್ತಪ್ಪಿಸಿ ಕಬೋರ್ಡ್ನಲ್ಲಿಟ್ಟಿದ್ದ ಚಿನ್ನ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ. ಎರಡು ದಿನಗಳ ಬಳಿಕ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಮನೆ ಮಾಲೀಕರು ದೂರು ನೀಡಿದ್ದರು.
ಇತ್ತ ಕಳ್ಳತನ ಮಾಡಿದ ಆರೋಪಿ ತನ್ನ ಊರಿಗೆ ಹೋಗಿದ್ದನು. ಹೀಗಾಗಿ ಮನೆಯೊಂದಕ್ಕೆ ಪೇಂಟಿಂಗ್ ಮಾಡಿಸಬೇಕೆಂದು ನಗರಕ್ಕೆ ಕರೆಯಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದನು. ಉತ್ತರಪ್ರದೇಶ ಮೂಲದ ಉಮೇಶ್ ಪ್ರಸಾದ್ ಜಾಧವ್ ಬಂಧಿತ ಆರೋಪಿ. ಈತನಿಂದ 6 ಲಕ್ಷ ಬೆಲೆಬಾಳುವ 100 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಜೈಲಿಗಟ್ಟಿದ್ದರು.
ಸೀರೆ ಕದ್ದ ಕಳ್ಳಿಯರ ಸೆರೆ : ಮತ್ತೊಂದೆಡೆ ಬೆಳಗಾವಿಯ ಖಡೇಬಜಾರ್ನಲ್ಲಿರುವ ವಿರೂಪಾಕ್ಷಿ ಬಟ್ಟೆ ಅಂಗಡಿಯಲ್ಲಿ ನವೆಂಬರ್ 3ರಂದು ಅಂದಾಜು 2 ಲಕ್ಷ ರೂ. ಮೌಲ್ಯದ 8 ಕಾಂಚೀವರಂ ಮತ್ತು 1 ಇಳಕಲ್ ಸೀರೆ ಕದ್ದು ಮಹಿಳೆಯು ಪರಾರಿಯಾಗಿದ್ದರು. ಎರಡು ತಂಡಗಳಲ್ಲಿ ಅಂಗಡಿಗೆ ಬಂದು ಕೃತ್ಯ ನಡೆಸಿದ್ದು, ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿತ್ತು. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕ ಮಹೇಶ ವಿರೂಪಾಕ್ಷಿ ದೂರು ನೀಡಿದ್ದರು. ನಂತರ ತನಿಖೆ ಕೈಗೊಂಡ ಪೊಲೀಸರು ಸೀರೆ ಕದ್ದು ಮಹಾರಾಷ್ಟ್ರದ ಶಿರಡಿಯಲ್ಲಿ ತಲೆಮರಿಸಿಕೊಂಡಿದ್ದ ಆಂಧ್ರಪ್ರದೇಶದ ಗುಂಟೂರಿನ ಕಳ್ಳರ ಗ್ಯಾಂಗ್ನ ಆರು ಜನ ಮಹಿಳೆಯರು, ಇಬ್ಬರು ಪುರುಷರು ಸೇರಿ ಒಟ್ಟು 8 ಜನರನ್ನು ಬಂಧಿಸಿ ಬೆಳಗಾವಿಗೆ ಕರೆತಂದಿದ್ದರು.
ಇದನ್ನೂ ಓದಿ :ಬೆಂಗಳೂರು: ಜೈಲಿನಲ್ಲಿದ್ದುಕೊಂಡೇ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ವಿಚಾರಣಾಧೀನ ಕೈದಿ!