ಬೆಂಗಳೂರು :ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರ ಉಚಿತ ಪ್ರಯಾಣ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದರು.
ಶಾಂತಿನಗರ, ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಶಿವಾಜಿನಗರ, ಆರ್‌ಟಿನಗರ, ಹೆಬ್ಬಾಳ, ವಿಜಯನಗರ, ಕೆಂಗೇರಿ, ಜಯನಗರ, ಜೆಪಿನಗರ, ಬಿಟಿಎಂ ಲೇಔಟ್ ಸೇರಿದಂತೆ ರಾಜಧಾನಿಯ ವಿವಿಧೆಡೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಸಾವಿರಾರು ಮಹಿಳೆಯರು ಟಿಕೆಟ್ ಇಲ್ಲದೆ ಪ್ರಯಾಣ ಬೆಳೆಸಿ ಸಂತಸ ವ್ಯಕ್ತಪಡಿಸಿದರು.
ವಾಯುವಜ್ರ ಸೇರಿದಂತೆ ಎಲ್ಲ ಬಸ್‌ಗಳಲ್ಲೂ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದರು. ಬಿಎಂಟಿಸಿ 6,600 ಬಸ್‌ಗಳನ್ನು ಹೊಂದಿದ್ದು, ಪ್ರತಿನಿತ್ಯ 54 ಸಾವಿರ ಟ್ರಿಪ್ನಿಂದ 10.84 ಲಕ್ಷ ಕಿಲೋಮೀಟರ್ ಕ್ರಮಿಸುತ್ತಿದೆ. ಸರಾಸರಿ 29 ಲಕ್ಷ ಪ್ರಯಾಣಿಕರು ನಿತ್ಯ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಬಿ.ಎಂ.ಟಿ.ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆಯವರೆಗೂ ಉಚಿತ ಪ್ರಯಾಣ: ಮಹಿಳೆಯರಿಗೆ ಸುರಕ್ಷಿತ ಮತ್ತು ಭದ್ರತೆಯುಳ್ಳ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುವುದು. ಮಹಿಳೆಯರು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಉಪಯೋಗಿಸುವುದರಿಂದ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಿದಂತಾಗಲಿದೆ. ಇಂದು ಮಧ್ಯರಾತ್ರಿ 12 ಗಂಟೆಯವರೆಗೂ ಬಿಎಂಟಿಸಿ ಬಸ್‌ಗಳಲ್ಲಿ ಸಂಪೂರ್ಣ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಯಾವುದೇ ದಾಖಲಾತಿ, ಗುರುತಿನ ಚೀಟಿಯ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಜನವರಿ 15 ರಂದು ನೀಡಿದ್ದ ಉಚಿತ ಪ್ರಯಾಣದ ಸೌಲಭ್ಯ: ಈ ಹಿಂದೆ ಜನವರಿ 15 ರಂದು ಬಿಎಂಟಿಸಿ ಉಚಿತ ಪ್ರಯಾಣ ಸೌಲಭ್ಯ ನೀಡಿತ್ತು. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಬಿಎಂಟಿಸಿ ಬೆಳ್ಳಿ ಮಹೋತ್ಸವ ಹಿನ್ನೆಲೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಅಂದು ಲಕ್ಷಾಂತರ ಮಂದಿ ಉಚಿತವಾಗಿ ಪ್ರಯಾಣಿಸಿದ್ದರು ಎಂದು ತಿಳಿಸಿದ್ದಾರೆ.
ಮಹಿಳೆಯರಿಗೆ ಶಿಕ್ಷಣವೇ ಆಸ್ತಿ ಹಾಗೂ ಶಕ್ತಿ: ಅನ್ಬುಕುಮಾರ್ :ಇನ್ನೊಂದೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೇಂದ್ರ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2023 ವಿಶೇಷವಾಗಿ ಆಚರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ನಾರಿ ಶಕ್ತಿ ಪ್ರಶಸ್ತಿ ಪುರಸ್ಕೃತರಾದ ಶೋಭಾ ಗಸ್ತಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅವರು, ಸಾಮಾಜಿಕ ಕಾಳಜಿ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಶೋಭಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಮಾಜದಲ್ಲಿರುವ ದೇವದಾಸಿ ಪದ್ಧತಿಯ ವಿರುದ್ಧ ಹೋರಾಡುತ್ತಿದ್ದಾರೆ. ಇಂದು ನಮ್ಮ ನಿಗಮದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಆಗಮಿಸಿ ಮಹಿಳಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರೇರಣೆ ತುಂಬಿದ್ದಾರೆ. ಮಹಿಳೆಯರಿಗೆ ಶಿಕ್ಷಣವೇ ಆಸ್ತಿ ಮತ್ತು ಶಕ್ತಿ ಎಂದು ಅಭಿಪ್ರಾಯಪಟ್ಟರು.
ನಿಗಮದ ವಿವಿಧ ಹುದ್ದೆಗಳಲ್ಲಿ ಒಟ್ಟು 2,821 ಮಹಿಳಾ ಉದ್ಯೋಗಿಗಳಿದ್ದಾರೆ. ಇವರು ಪುರುಷ ಕಾರ್ಮಿಕರಿಗೆ ಸಮಾನವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿಗಮವು ಎಲ್ಲ ರೀತಿಯಲ್ಲಿಯೂ ಅವರನ್ನು ಗೌರವಿಸಿ ಪ್ರೋತ್ಸಾಹಿಸುತ್ತಿರುವ ಮತ್ತು ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ :ದಾರಿ ತಪ್ಪಿಸುವ, ಯಾಮಾರಿಸುವ ಯೋಜನೆಗೆ ಕಿವಿಗೊಡಬೇಡಿ : ಕಾಂಗ್ರೆಸ್ ಉಚಿತ ಯೋಜನೆಗಳಿಗೆ ಸಿಎಂ ತಿರುಗೇಟು