ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಸದ ತೇಜಸ್ವಿ ಸೂರ್ಯ ಮತ್ತು ರಾಷ್ಟ್ರೀಯ ವಕ್ತಾರರಾಗಿ ನೇಮಕವಾಗಿರುವ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರನ್ನು ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ರಾಜೀವ್ ಚಂದ್ರಶೇಖರ್ ಹಾಗೂ ಸಂಸದ ತೇಜಸ್ವಿ ಸೂರ್ಯರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಕಾರ್ಯಕರ್ತರು ನನ್ನನ್ನು ಗೆಲ್ಲಿಸಿದ್ದು ತೇಜಸ್ವಿ ಸೂರ್ಯ ಅಂತ ಅಲ್ಲ. ಬಿಜೆಪಿ ಚಿಹ್ನೆಯ ಮೇಲೆ ನನ್ನನ್ನು ಗೆಲ್ಲಿಸಿದ್ದಾರೆ. ಆ ಚಿಹ್ನೆಯ ಹಿಂದೆ ಲಕ್ಷಾಂತರ ಜನರ ತ್ಯಾಗ ಇದೆ. ಆ ಚಿಹ್ನೆ ಅಂದರೆ ದೇಶಪ್ರೇಮ, ದೇಶಕ್ಕಾಗಿ ಬಲಿದಾನ. ಈ ಎಲ್ಲಾ ಭಾವನೆ ಬರಲು ಹಲವರ ತಪಸ್ಸು ಇದೆ. ಆ ತಪಸ್ಸಿನ ಪರಿಣಾಮವಾಗಿ ಈ 28 ವರ್ಷದ ಯುವಕನ ಮೇಲೆ ಜನ ನಂಬಿಕೆ ಇಟ್ಟಿದ್ದಾರೆಯೇ ಹೊರತು, ಇನ್ನಾವುದೇ ಕಾರಣಕ್ಕೆ ಅಲ್ಲ ಎಂದು ವಿವರಿಸಿದರು.
'ನಾನು ಪ್ಲಸ್ ಸಂಘಟನೆ' ಅಂತಂದಾಗ ನೀನು ಎಲ್ಲವೂ. 'ನೀನು ಮೈನಸ್ ಸಂಘಟನೆ' ಅಂದ್ರೆ ನೀನು ಯಾರೂ ಅಲ್ಲ. 'ತೇಜಸ್ವಿ ಸೂರ್ಯ ಪ್ಲಸ್ ಬಿಜೆಪಿ' ಅಂದ್ರೆ ರಾಷ್ಟ್ರೀಯ ಮಟ್ಟದ ನಾಯಕನಾಗುತ್ತಾನೆ. 'ತೇಜಸ್ವಿ ಸೂರ್ಯ ಮೈನಸ್ ಬಿಜೆಪಿ' ಅಂದ್ರೆ ಯಾರೂ ಅಲ್ಲ. ಅದು ಸಂಘಟನೆಯ ಶಕ್ತಿ. ಹಾಗಾಗಿ ಸಂಘಟನೆ ಗಟ್ಟಿಗೊಳಿಸಲು ನಾವೆಲ್ಲ ಯತ್ನಿಸಬೇಕು ಎಂದು ತಿಳಿಸಿದರು.