ಬೆಂಗಳೂರು: ಮುಂಬರುವ ಶೈಕ್ಷಣಿಕ ವರ್ಷದಿಂದ ಅನುದಾನರಹಿತ ಖಾಸಗಿ ಶಾಲೆಗಳು ಪಡೆಯುವ ಶುಲ್ಕದ ವಿವರವನ್ನು ಶಾಲಾ ವೆಬ್‌ಸೈಟ್ ಹಾಗೂ ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸೂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಶಾಲೆಗಳು ಪಡೆಯುವ ಶುಲ್ಕ ವಿವರವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದರೆ ಅವುಗಳ ಗೌಪ್ಯತೆಗೆ ಧಕ್ಕೆಯಾಗುತ್ತದೆ. ಹೀಗಾಗಿ ಶಿಕ್ಷಣ ಇಲಾಖೆ ಸುತ್ತೋಲೆ ರದ್ದು ಪಡಿಸುವಂತೆ ಕೋರಿ ರಾಜಾಜಿನಗರದ ಶ್ರೀವಾಣಿ ಎಜುಕೇಷನ್ ಸೆಂಟರ್ ಟ್ರಸ್ಟ್ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ನ್ಯಾ.ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ ಸುತ್ತೋಲೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಇದೇ ವೇಳೆ ಅರ್ಜಿಗೆ ಆರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿ ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:
ಕರ್ನಾಟಕ ಶಿಕ್ಷಣ ಸಂಸ್ಥೆಗಳ ಶುಲ್ಕ ಮತ್ತು ದೇಣಿಗೆ ನಿಯಂತ್ರಣ ಅಧಿನಿಯಮ 1999ರ ನಿಯಮ 4(1)ರ ಪ್ರಕಾರ ರಾಜ್ಯದ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಪ್ರತಿವರ್ಷ ಡಿ. 31ರೊಳಗೆ ಶೈಕ್ಷಣಿಕ ವರ್ಷದಲ್ಲಿ ಸಂಗ್ರಹಿಸಿರುವ ಶುಲ್ಕದ ವಿವರ, ಹಿಂದಿನ ಹಣಕಾಸು ವರ್ಷದ ಲೆಕ್ಕಪರಿಶೋಧನಾ ವರದಿ ಮತ್ತು ಎಲ್ಲಾ ಪಬ್ಲಿಕ್ ಪರೀಕ್ಷೆಗಳ ಫಲಿತಾಂಶವನ್ನು ಶಾಲೆ ಸೂಚನಾ ಫಲಕ, ವೆಬ್‌ಸೈಟ್ ಮತ್ತು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯು 2019ರ ಜುಲೈ 24ರಂದು ಸುತ್ತೋಲೆ ಹೊರಡಿಸಿದೆ.
ಈ ಸುತ್ತೋಲೆ ಪ್ರಶ್ನಿಸಿರುವ ಶಾಲೆ, ಸರ್ಕಾರ ಯಾವುದೇ ನಿಯಮ ಜಾರಿಗೊಳಿಸುವ ಮುನ್ನ ಕರಡು ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಬೇಕು. ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಕರಡು ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಬೇಕು. ಆದರೆ ಈ ಪ್ರಕರಣದಲ್ಲಿ ಸರ್ಕಾರ ಪ್ರಕ್ರಿಯೆ ಪಾಲನೆ ಮಾಡಿಲ್ಲ.
ಇನ್ನು ಸರ್ಕಾರದ ಸುತ್ತೋಲೆಯಿಂದ ಖಾಸಗಿ ಶಾಲೆಗಳ ಗೌಪ್ಯತೆ ಹಕ್ಕು ಉಲ್ಲಂಘನೆಯಾಗುತ್ತದೆ. ಆದ್ದರಿಂದ ಈ ಸುತ್ತೋಲೆ ಕಾನೂನು ಬಾಹಿರ ಎಂದು ಘೋಷಿಸಿ ರದ್ದುಪಡಿಸಬೇಕು. ಜೊತೆಗೆ ಅರ್ಜಿ ಇತ್ಯರ್ಥವಾಗುವರೆಗೆ ಸುತ್ತೋಲೆಗೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದರು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ಪ್ರಮೋದಿನಿ ಕಿಶನ್, ಸುತ್ತೋಲೆ ಹೊರಡಿಸುವ ಮುನ್ನ ಕರಡು ಪ್ರಕಟಿಸಲಾಗಿದೆ ಎಂಬ ವಿಚಾರವನ್ನು ಪೀಠದ ಗಮನಕ್ಕೆ ತಂದರು. ಹಾಗೆಯೇ ಕರಡು ಸುತ್ತೋಲೆ ಪ್ರತಿಯನ್ನು ನ್ಯಾಯಪೀಠಕ್ಕೆ ಒದಗಿಸಿ ಅರ್ಜಿದಾರರ ಮಧ್ಯಂತರ ಮನವಿ ಪುರಸ್ಕರಿಸಬಾರದು ಎಂದು ಕೋರಿದರು. ಮಾಹಿತಿ ಪರಿಗಣಿಸಿದ ಪೀಠ, ಸರ್ಕಾರದ ಸುತ್ತೋಲೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿ ಆದೇಶಿಸಿತು.